ಬರ, ಬೇಸಿಗೆಯನ್ನು ಧೈರ್ಯದಿಂದ ಎದುರಿಸಿ

ಕುಕನೂರು: ಕುಕನೂರು, ಯಲಬುರ್ಗಾ ತಾಲೂಕಿನಲ್ಲಿ ನೀರಿನ ಅಭಾವ ಸೃಷ್ಟಿಯಾಗುವ ಮುನ್ಸೂಚನೆ ಕಂಡು ಬರುತ್ತಿದ್ದು, ನೀರಿನ ಮೂಲಗಳ ಸದ್ಬಳಕೆ ಹಾಗೂ ನೀರು ವ್ಯರ್ಥ ಮಾಡಬಾರದು ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.

ಮಸಬಹಂಚಿನಾಳದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಮೀಣ ಕುಡಿವ ನೀರು ನ್ಯೆರ್ಮಲ್ಯದನ್ವಯ ಸಾಮರ್ಥ್ಯಾಭಿವೃದ್ಧಿ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ ಪ್ರತಿ ವರ್ಷ ನೀರಿನ ಅಭಾವ ಸಾಮಾನ್ಯವಾಗಿದೆ. ಬರ ಹಾಗೂ ಬೇಸಿಗೆಯನ್ನು ಧೈರ್ಯದಿಂದ ಎದುರಿಸಬೇಕಾಗಿದೆ. ಕುಡಿವ ನೀರಿನ ಸಮಸ್ಯೆ ಶಾಶ್ವತವಾಗಿ ಹಿಮ್ಮೆಟ್ಟಿಸಲು ಕೃಷ್ಣ ನದಿಯಿಂದ ಶೀಘ್ರದಲ್ಲಿಯೇ ನೀರು ತರುವುದಾಗಿ ಭರವಸೆ ನೀಡಿದರು.

ಈ ಹಿಂದಿನ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮದಲ್ಲಿ ಸಿಸಿ ರಸ್ತೆಯನ್ನು ಕಳಪೆಯಾಗಿ ನಿರ್ಮಿಸಿದ್ದರಿಂದ ರಸ್ತೆ ಹದಗೆಟ್ಟು ಹೋಗಿವೆ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದರು. ತಾಪಂ ಅಧಿಕಾರಿ ಕೆ.ತಿಮ್ಮಪ್ಪ, ಕುಡಿವ ನೀರಿನ ತಾಲೂಕಾಧಿಕಾರಿ ತಿರಕನಗೌಡ, ಗ್ರಾಪಂ ಅಧ್ಯಕ್ಷೆ ಮಂಜಮ್ಮ ದೊಡ್ಮನಿ, ಪಿಡಿಒ ಶರಣಪ್ಪ ಕೆಲಗಿನಮನಿ, ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್ ಮತ್ತಿತರರಿದ್ದರು.