ಕುರುಗೋಡು: ಬರಪೀಡಿತ ಪ್ರದೇಶಗಳ ರೈತರಿಗೆ ಕೂಡಲೇ ಪರಿಹಾರ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಪಿಐ(ಎಂ) ಸ್ಥಳೀಯ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಕೆ.ರಾಘವೇಂದ್ರರಾವ್‌ಗೆ ಮನವಿ ಸಲ್ಲಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ವಿಎಸ್.ಶಿವಶಂಕರ್ ಮಾತನಾಡಿ,ಮುಂಗಾರು ತಡವಾಗಿ ಪ್ರವೇಶಿಸಿದ್ದರಿಂದ ಹಲವೆಡೆ 25 ಲಕ್ಷ ಎಕರೆ ಪ್ರದೇಶದಲ್ಲಿ ಬಿತ್ತನೆ ಆಗಿಲ್ಲವೆಂದು ಸರ್ಕಾರದ ಅಂಕಿ ಅಂಶಗಳು ಹೇಳುತ್ತವೆ.

ಇದೀಗ ಬಿತ್ತನೆಯಾದ 150 ಲಕ್ಷ ಎಕರೆಯಷ್ಟು ಪ್ರದೇಶದ ಬೆಳೆ ಮಳೆ ಅಥವಾ ನೀರಿನ ಅಭಾವದಿಂದ ಇಳುವರಿ ಕುಸಿತ ಹಾಗೂ ಬೆಳೆ ನಷ್ಟವಾಗುವ ಪರಿಸ್ಥಿತಿ ಇದೆ. ಬೋರ್‌ವೆಲ್‌ಗಳಲ್ಲಿ ಜಲ ಪಾತಾಳ ಸೇರುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: ಬರಪೀಡಿತ ಪ್ರದೇಶಗಳ ಲಿಸ್ಟ್ನಲ್ಲಿ ತಿಕೋಟಾ ಯಾಕಿಲ್ಲ?
ಮುಂಬರುವ ದಿನಗಳಲ್ಲಿಯೂ ಮಳೆ ಖಾತ್ರಿ ಇಲ್ಲವಾಗಿದೆ. ಕೂಲಿಕಾರರು ಹಾಗೂ ಬಡರೈತರು ಕೂಲಿ ಅರಸಿ ಗುಳೆ ಹೋಗುವಂತಾಗಿದೆ. ಆದ್ದರಿಂದ ಇಡೀ ರಾಜ್ಯವನ್ನು ಬರ ಪೀಡಿತವೆಂದು ಘೋಷಿಸಬೇಕು. ತಕ್ಷಣ ಬರ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಕಾರ್ಯದರ್ಶಿ ಗಾಳಿ ಬಸವರಾಜ ಮಾತನಾಡಿ, ಬರದಿಂದ ಮುಂದೆ ಆಹಾರಧಾನ್ಯದ ಬೆಲೆಗಳು ಮತ್ತಷ್ಟು ಗಗನ ಮುಖಿಯಾಗಬಹುದು. ಪಟ್ಟಣ ಹಾಗೂ ನಗರದ ಜನರನ್ನು ಸಂಕಷ್ಟಕ್ಕೆ ದೂಡಲಿವೆ. ಹಾಗಾಗಿ ಇಡೀ ರಾಜ್ಯವನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಿದರು.
ಪ್ರಮುಖರಾದ ಎನ್.ಸೋಮಪ್ಪ, ಎನ್.ಹುಲೆಪ್ಪ, ಸಣ್ಣ ಕೆಂಚಪ್ಪ, ಯು.ಶಂಕ್ರಪ್ಪ, ನಿಂಗಪ್ಪ ಇದ್ದರು.