ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತಕ್ಕೆ ಬರ! ನೀತಿ ಸಂಹಿತೆ, ಶಾಲಾ ಕಾಲೇಜು ರಜೆ ಪರಿಣಾಮ

| ವರುಣ ಹೆಗಡೆ ಬೆಂಗಳೂರು

ಬೇಸಿಗೆ ಬೇಗೆಯ ಜತೆಯೇ ಹೆಚ್ಚುತ್ತಿರುವ ಲೋಕಸಭೆ ಚುನಾವಣೆಯ ಕಾವು ಸರ್ಕಾರಿ ಬ್ಲಡ್ ಬ್ಯಾಂಕ್​ಗಳನ್ನೂ ಬಸವಳಿಸಿದೆ. ಈ ಎರಡೂ ಕಾರಣದಿಂದಾಗಿ ರಕ್ತದಾನ ಶಿಬಿರಗಳು ನಡೆಯದ ಪರಿಣಾಮ ರಾಜ್ಯಾದ್ಯಂತ ರಕ್ತದ ಕೊರತೆಯ ಆತಂಕ ಎದುರಾಗಿದೆ. ಶಾಲಾ, ಕಾಲೇಜುಗಳಿಗೆ ಬೇಸಿಗೆ ರಜೆ ಇರುವುದು ಒಂದೆಡೆಯಾದರೆ, ಚುನಾವಣೆ ನೀತಿಸಂಹಿತೆಯಿಂದಾಗಿ ರಾಜಕಾರಣಿಗಳು, ಗಣ್ಯರು ತಮ್ಮ ಜನ್ಮದಿನದಂದು ರಕ್ತದಾನ ಶಿಬಿರ ಏರ್ಪಡಿಸುವ ಗೋಜಿಗೆ ಹೋಗುತ್ತಿಲ್ಲ. ಇದರ ಜತೆಗೆ ರಾಜ್ಯದಲ್ಲಿನ ಖಾಸಗಿ ರಕ್ತನಿಧಿ ಕೇಂದ್ರಗಳೂ ನಿಗದಿತ ಪ್ರಮಾಣದಲ್ಲಿ ರಕ್ತ ಸಂಗ್ರಹಿಸುವಲ್ಲಿ ವಿಫಲವಾಗುತ್ತಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರಂಭಿಸಿದ ಜೀವ ಸಂಜೀವಿನಿ ಯೋಜನೆಯಡಿ ಹೆಸರು ನಮೂದಿಸಿರುವ 121 ಕೇಂದ್ರದಿಂದ ಸದ್ಯ 2,801 ಯುನಿಟ್ ರಕ್ತವಷ್ಟೇ ಲಭ್ಯವಿದೆ. ಇನ್ನು ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 200 ರಕ್ತನಿಧಿ ಕೇಂದ್ರದಲ್ಲಿ ಬೆಂಗಳೂರು, ಮೈಸೂರು, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಸೇರಿ ಬೆರಳೆಣಿಕೆ ಜಿಲ್ಲೆಗಳಲ್ಲಿ ಮಾತ್ರ ಬೇಡಿಕೆಗೆ ಅನುಗುಣವಾಗಿ ರಕ್ತ ಪೂರೈಕೆಯಾಗುತ್ತಿದೆ.

ಉ.ಕರ್ನಾಟಕಕ್ಕೆ ಬರ: ನೀರಿನಂತೆ ರಕ್ತದ ಕೊರತೆಯಲ್ಲೂ ಉತ್ತರ ಕರ್ನಾಟಕ ಮುಂದಿದೆ. ಜಾಗೃತಿ ಕೊರತೆಯಿಂದ ಸಾರ್ವಜನಿಕರು ರಕ್ತದಾನಕ್ಕೆ ಮುಂದೆ ಬರುತ್ತಿಲ್ಲ. ಹೀಗಾಗಿ ಬಹುತೇಕ ರಕ್ತನಿಧಿ ಕೇಂದ್ರದಲ್ಲಿ ಮೂರರಿಂದ ನಾಲ್ಕು ಯುನಿಟ್ ಮಾತ್ರ ರಕ್ತ ಸಂಗ್ರಹವಿದೆ. ಧಾರವಾಡ, ಬಳ್ಳಾರಿ, ವಿಜಯಪುರ, ಯಾದಗಿರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ, ಗದಗ ಜಿಲ್ಲೆಯಲ್ಲಿ ರಕ್ತದ ಅಭಾವ ಹೆಚ್ಚುವ ಸಾಧ್ಯತೆಯಿದೆ. ಬಳ್ಳಾರಿಯ ವೈದ್ಯಕೀಯ ಕಾಲೇಜಿನ ಬ್ಲಡ್ ಬ್ಯಾಂಕ್​ನಲ್ಲಿ ಕೇವಲ 1ಯುನಿಟ್ ರಕ್ತವಿದೆ. ದಾವಣಗೆರೆಯ ಲೈಫ್ ಲೈನ್ ರಕ್ತನಿಧಿ, ಕಲಬುರಗಿಯ ಹೆಲ್ತ್ ಕೇರ್ ರಕ್ತನಿಧಿ, ಕೊಪ್ಪಳದ ಇಂಡಿಯನ್ ರೆಡ್ ಕ್ರಾಸ್ ಶಾಖೆ, ವಿಜಯಪುರದ ಶ್ರೀ ಸಿದ್ದೇಶ್ವರ ರಕ್ತನಿಧಿ, ಧಾರವಾಡ ಎಸ್​ಡಿಎಂ ಕಾಲೇಜು ರಕ್ತನಿಧಿ, ಚಿತ್ರದುರ್ಗದ ಎಸ್.ಜಿ.ಎಂ. ರಕ್ತನಿಧಿ ಸೇರಿ ವಿವಿಧ ಬ್ಲಡ್ ಬ್ಯಾಂಕ್​ನಲ್ಲಿ ರಕ್ತದ ಕೊರತೆಯಿದೆ.

ಸದ್ಯಕ್ಕೆ ರಕ್ತದ ಕೊರತೆಯ ಸಮಸ್ಯೆಯಿಲ್ಲ. ಚುನಾವಣೆ ನೀತಿ ಸಂಹಿತೆ, ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಒಟ್ಟಾಗಿ ಬಂದಿದ್ದರಿಂದ ರಕ್ತದಾನ ಶಿಬಿರ ನಡೆಯುತ್ತಿಲ್ಲ. ಒಂದು ವೇಳೆ ಅಭಾವ ಉಂಟಾದಲ್ಲಿ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ.

| ಡಾ. ಜಯರಾಜ್ ಉಪ ನಿರ್ದೇಶಕರು ಬ್ಲಡ್ ಸೆಫ್ಟಿ ವಿಭಾಗ

ಸಂಗ್ರಹ ಸವಾಲು

ಖಾಸಗಿ ರಕ್ತನಿಧಿ ಕೇಂದ್ರಗಳು ತುರ್ತು ಸಂದರ್ಭದಲ್ಲಿ ರಕ್ತ ಪೂರೈಕೆ ಮಾಡಲು ಕಾಯಂ ದಾನಿಗಳನ್ನು ಅವಲಂಬಿಸಿವೆ. ಒಂದು ವೇಳೆ ತುರ್ತು ಪರಿಸ್ಥಿತಿಯಲ್ಲಿ ಅಪರೂಪದ ರಕ್ತ ಮಾದರಿಯ ದಾನಿಗಳು ಸಿಗದಿದ್ದಲ್ಲಿ ರೋಗಿಯ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಕೂಡ ಇದೆ. ಅಷ್ಟೇ ಅಲ್ಲ, ಡೆಂಘ, ಚಿಕೂನ್​ಗುನ್ಯಾ, ಮಲೇರಿಯಾ, ಎಚ್1ಎನ್1ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಕ್ಕೆ ಒಳಪಟ್ಟವರಿಗೆ ಪ್ಲೇಟ್​ಲೆಟ್ ರಕ್ತದ ಅಗತ್ಯಬೀಳುತ್ತದೆ. ಈ ಹಿನ್ನಲೆಯಲ್ಲಿ ರಕ್ತಕ್ಕೆ ಬೇಡಿಕೆ ಹೆಚ್ಚಳವಾಗುವ ಸಾಧ್ಯತೆಯಿದೆ.

ರಕ್ತದಾನ ಶಿಬಿರಗಳು ನಡೆಯದಿರುವುದರಿಂದ ಮುಂದಿನ ಒಂದೂವರೆ ತಿಂಗಳು ರಕ್ತ ಪೂರೈಕೆ ಸವಾಲಾಗಲಿದೆ. ಸಮಸ್ಯೆ ಎದುರಾದರೆ ದಾನಿಗಳನ್ನು ಸಂರ್ಪಸುತ್ತೇವೆ.

| ಎಸ್. ಅನುರಾಧಾ ರಾಷ್ಟ್ರೆೊತ್ಥಾನ ರಕ್ತನಿಧಿಯ ತಾಂತ್ರಿಕ ಮೇಲ್ವಿಚಾರಕಿ