ಕೇಂದ್ರ ತಂಡದಿಂದ ಬರ ವೀಕ್ಷಣೆ

ಬಾಗಲಕೋಟೆ: ಜಲಸಂಪನ್ಮೂಲ ಸಚಿವಾಲಯದ ಹಿರಿಯ ಜಂಟಿ ಆಯುಕ್ತ ಎಸ್.ಕೆ. ಕಾಂಬೋಜ್ ನೇತೃತ್ವದ ಡಾ.ತರುಣ ಕುಮಾರ ಸಿಂಗ್ ಮತ್ತು ಸತ್ಯಕುಮಾರ ಸದಸ್ಯರನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಯ ವಿವಿಧ ಬರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಬುಧವಾರ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡ ಬೆಳೆ ಹಾನಿ, ವಿವಿಧ ನರೇಗಾ ಕಾಮಗಾರಿ ಹಾಗೂ ಕೆರೆಗಳನ್ನು ವೀಕ್ಷಿಸಿ 10 ದಿನಗಳೊಳಗಾಗಿ ವರದಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗುವುದೆಂದು ತಿಳಿಸಿತು. ಬಾಗಲಕೋಟೆ ಜಿಲ್ಲೆಯಲ್ಲಿ ಬರದಿಂದ ಗಂಭೀರ ಪರಿಸ್ಥಿತಿ ಇದ್ದು, ನಾಲ್ಕು ವರ್ಷಗಳಿಂದ ಸತತ ಬರದಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಆಯುಕ್ತ ಎಸ್.ಕೆ. ಕಾಂಬೋಜಿ ತಿಳಿಸಿದರು.

ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಜಿಲ್ಲೆಯ ಬರ ಪರಿಸ್ಥಿತಿ, ಕೃಷಿ ತೋಟಗಾರಿಕೆ, ಕುಡಿಯುವ ನೀರು, ಮೇವು ಕುರಿತಂತೆ ಬರದ ಬಗ್ಗೆ ವಾಸ್ತವ ಸ್ಥಿತಿಯನ್ನು ತಂಡಕ್ಕೆ ವಿವರಿಸಿದರು. ಜಿಲ್ಲೆಯಲ್ಲಿ ಬರದ ಹಾನಿಯಿಂದಾಗಿ ಒಟ್ಟು 157.36 ಕೋಟಿ ರೂ. ಬೇಡಿಕೆ ಇದ್ದು, ಈ ಪೈಕಿ 129.19 ಕೋಟಿ ರೂ. ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ, 16.16 ಕೋಟಿ ರೂ. ಮೇವು ಹಾಗೂ ಗೋಶಾಲೆ, ಕುಡಿಯುವ ನೀರು ಪೈಪ್​ಲೈನ್ ಅಳವಡಿಕೆ 12 ಕೋಟಿ ರೂ. ಬೇಡಿಕೆ ಸಲ್ಲಿಸಿರುವುದಾಗಿ ಹೇಳಿದರು.

ಅಳಲು ತೋಡಿಕೊಂಡ ರೈತರು: ಬಾದಾಮಿ ತಾಲೂಕಿನ ಬೆಳ್ಳಿಕಂಡಿ ಕೆರೆ ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಈ ಕೆರೆಯಲ್ಲಿರುವ ನೀರು ಇನ್ನು 10 ರಿಂದ 15 ದಿನಗಳು ಬಳಕೆಗೆ ಲಭ್ಯವಾಗುತ್ತದೆ. ನಂತರ ನೀರಿನ ತೊಂದರೆಯಾಗುತ್ತದೆ. ಜನ, ಜಾನುವಾರುಗಳು ನೀರಿಲ್ಲದೆ ಅಲೆದಾಡುವ ಸ್ಥಿತಿ ನಿರ್ವಣವಾಗಲಿದೆ ಎಂದು ರೈತ ವಿಠಲ ಖಂಡ್ರೆ ಹೇಳಿದರು. ಕೆರೂರ ಹತ್ತಿರವಿರುವ ರೈತ ಬಸಪ್ಪ ಕಟ್ಟಿಯವರ 15 ಎಕರೆ ಜಮೀನಿನಲ್ಲಿ ಬೆಳೆದ ಜೋಳ ಮತ್ತು ಕಡಲೆ ಬೆಳೆ ಸಂಪೂರ್ಣವಾಗಿ ಒಣಗಿದ್ದು, ದನಕರುಗಳಿಗೆ ನೀರು ಹಾಗೂ ಮೇವಿನ ತೊಂದರೆಯಾಗುತ್ತಿದೆ ಎಂದು ವೀಕ್ಷಣೆಗೆ ಬಂದ ಬರ ಅಧ್ಯಯನ ತಂಡದ ಎದುರು ಅಳಲು ತೋಡಿಕೊಂಡರು.

ಜಿಪಂ ಸಿಇಒ ಗಂಗೂಬಾಯಿ ಮಾನಕರ, ಉಪವಿಭಾಗಾಧಿಕಾರಿ ಎಚ್.ಜಯಾ, ಜಿ.ಪಂ ಉಪಕಾರ್ಯದರ್ಶಿ ದುರ್ಗೆಶ ರುದ್ರಾಕ್ಷಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಬರ ಕಾಮಗಾರಿ ಪರಿಶೀಲನೆ:ಕೇಂದ್ರ ತಂಡ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಹತ್ತಿರವಿರುವ ಚನಬಸಪ್ಪ ಹಲಕುರ್ಕಿ ರೈತನ 4 ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ಸಂಪೂರ್ಣ ಒಣಗಿಹೋಗಿರುವುದನ್ನು ವೀಕ್ಷಿಸಿ, ನಂತರ ಸೂಳಿ ಕೇರಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಬರಗಾಲ ಕಾಮಗಾರಿಗಳನ್ನು ಪರಿಶೀಲಿಸಿತು. ಬಾಗಲಕೋಟೆ ನಗರದ ಎಪಿಎಂಸಿ ಹತ್ತಿರ ಮೇವು ಸಂಗ್ರಹಣೆ ಬಗ್ಗೆ ಮಾಹಿತಿ ಪಡೆದರು.