| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದ ಆರ್ಥಿಕತೆಯನ್ನು ಮೂರು ಪಟ್ಟು ಅಂದರೆ ಒಂದು ಟ್ರಿಲಿಯನ್ ಡಾಲರ್ಗೆ ವೃದ್ಧಿಸಲು ಕಾರ್ಯತಂತ್ರ ರೂಪಿಸುತ್ತಿದ್ದ ಸರ್ಕಾರಕ್ಕೆ ಈಗ ಬರ ಪರಿಸ್ಥಿತಿ ಭಾರಿ ಆಘಾತ ತಂದೊಡ್ಡಿದೆ. ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನ ದರ (ಜಿಎಸ್ಡಿಪಿ) ಕುಸಿಯುವ ಆತಂಕದ ಬಹುದೊಡ್ಡ ಸವಾಲು ಸರ್ಕಾರದ ಮುಂದಿದೆ.
ಐದು ಗ್ಯಾರಂಟಿಗಳ ಪೈಕಿ ನಾಲ್ಕನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದ ಸರ್ಕಾರ, 2032ರ ವೇಳೆಗೆ ರಾಜ್ಯದ ಆರ್ಥಿಕತೆಯನ್ನು ಮೂರು ಪಟ್ಟು ಹೆಚ್ಚಿಸುವುದಕ್ಕೆ ಸಿದ್ಧವಾಗುತ್ತಿತ್ತು. ಆದರೆ, ಜಿಎಸ್ಡಿಪಿಗೆ ಕೊಡುಗೆ ನೀಡುವ ಕೃಷಿ ಮತ್ತು ಉತ್ಪಾದನಾ ವಲಯದಲ್ಲಿ ಕುಸಿತವಾಗುವ ಸಾಧ್ಯತೆಯನ್ನು ಅರ್ಥಶಾಸ್ತ್ರಜ್ಞರು ಗುರುತಿಸುತ್ತಾರೆ. ಇದರಿಂದಾಗಿ ಟ್ರಿಲಿಯನ್ ಡಾಲರ್ ಆರ್ಥಿಕತೆ ಕನಸು ಇನ್ನಷ್ಟು ವರ್ಷ ಮುಂದಕ್ಕೆ ಹೋಗಲಿದೆ.
ಗ್ಯಾರಂಟಿಗಳಿಂದಾಗಿ ಆರ್ಥಿಕ ಚಟುವಟಿಕೆಗಳು ವೃದ್ಧಿಯಾಗಿ ಜಿಎಸ್ಡಿಪಿ ಹೆಚ್ಚಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಕೈಕೊಟ್ಟಿರುವ ಮುಂಗಾರು 236 ತಾಲೂಕುಗಳ ಪೈಕಿ 195 ತಾಲೂಕುಗಳಲ್ಲಿ ಭೀಕರ ಬರವನ್ನು ತಂದಿದೆ. ಆರ್ಥಿಕತೆ ವೃದ್ಧಿಸುವುದೆಂದರೆ ಜಿಎಸ್ಡಿಪಿ ಹೆಚ್ಚಿಸುವ ಕೆಲಸವಾಗಿದೆ. ಜಿಎಸ್ಡಿಪಿಗೆ ಕೊಡುಗೆ ನೀಡುವ ವಿವಿಧ ವಲಯಗಳಲ್ಲಿನ ಪಾಲು ಹೆಚ್ಚಿಸಬೇಕಾಗಿದೆ. ಕೃಷಿ, ಉದ್ಯಮ ಮತ್ತು ಸೇವಾ ವಲಯಗಳ ಪಾಲು ನಿರೀಕ್ಷೆಯಷ್ಟು ಬರುವ ಸಾಧ್ಯತೆಗಳಿಲ್ಲ.
ಬರದ ಪರಿಣಾಮಗಳೇನು?: ರಾಜ್ಯದ ಆರ್ಥಿಕತೆಯ ಮೇಲೆ ಬರ ಬಹುದೊಡ್ಡ ಪರಿಣಾಮ ಬೀರುತ್ತದೆ. ಜಿಎಸ್ಡಿಪಿಗೆ ಕೃಷಿ ವಲಯ ನೀಡುವ ಪಾಲು ಶೇ.5.5 ರಿಂದ 2.5ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ. ಅದರ ಪರಿಣಾಮ ಉತ್ಪಾದನಾ ವಲಯದ ಮೇಲೆ ಬೀಳುತ್ತದೆ. ಏಕೆಂದರೆ ಕೃಷಿ ಅವಲಂಬಿತ ಉದ್ದಿಮೆಗಳಲ್ಲಿ ಉತ್ಪಾದನೆ ಕಡಿಮೆಯಾಗುತ್ತದೆ. ಗ್ರಾಹಕರು ಖರೀದಿಯನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ. ಇದರಿಂದ ಉತ್ಪಾದನಾ ವಲಯದಿಂದ ಜಿಎಸ್ಡಿಪಿಗೆ ಶೇ.5.1 ರಷ್ಟು ಕೊಡುಗೆ ಇದ್ದು, ಬಹುತೇಕ ಶೇ.4 ಕ್ಕೆ ಇಳಿಯಬಹುದೆಂದು ಅಂದಾಜು ಮಾಡಲಾಗುತ್ತಿದೆ. ಸೇವಾ ವಲಯ ಶೇ.9.2 ರಷ್ಟು ಕೊಡುಗೆ ನೀಡುತ್ತಿದ್ದು, ಅದರಲ್ಲಿಯೂ ಕಡಿಮೆಯಾಗುವ ಸಾಧ್ಯತೆಗಳನ್ನು ಗುರುತಿಸಲಾಗುತ್ತಿದೆ. ಇದರಿಂದಾಗಿ ಒಂದೆಡೆ ಬಾಹ್ಯ ಸಾಲ ಹೆಚ್ಚಳವಾದರೆ, ಇನ್ನೊಂದೆಡೆ ತಲಾವಾರು ಆದಾಯ ಕಡಿಮೆಯಾಗುತ್ತದೆ. ಕೃಷಿ ಉತ್ಪನ್ನಗಳ ರಫ್ತಿನ ಪ್ರಮಾಣ ಸಹ ಇಳಿಕೆಯಾಗಲಿದೆ. ಇದು ಆರ್ಥಿಕ ಬೆಳವಣಿಗೆಗೆ ಹೊಡೆತ ಕೊಡುತ್ತದೆ.
ನೀಲನಕ್ಷೆ: ರಾಜ್ಯದ ಆರ್ಥಿಕತೆಯನ್ನು ಒಂದು ಟ್ರಿಲಿಯನ್ ಡಾಲರ್ಗೆ ಹೆಚ್ಚಿಸಲು ಸರ್ಕಾರ ತಜ್ಞರ ಅಭಿಪ್ರಾಯಗಳನ್ನು ಆಧರಿಸಿ 14 ವಲಯದಲ್ಲಿ ನೀಲನಕ್ಷೆಯನ್ನು ತಯಾರು ಮಾಡಿದೆ. 2032ರ ವೇಳೆಗೆ ರಾಜ್ಯಕ್ಕೆ 152.87 ಲಕ್ಷ ಕೋಟಿ ರೂ.ಗಳ ಹೂಡಿಕೆಯನ್ನು ತರುವುದು, ಅದರಲ್ಲಿ 107.01 ಲಕ್ಷ ಕೋಟಿ ರೂ.ಗಳು ಖಾಸಗಿ ವಲಯದಿಂದಲೇ ಬರುವಂತೆ ನೋಡಿಕೊಳ್ಳುವುದು ನೀಲನಕ್ಷೆಯಲ್ಲಿರುವ ಪ್ರಮುಖ ಮಾಹಿತಿಯಾಗಿದೆ.
ಬೆಲೆ ಏರಿಕೆ, ಹಣದುಬ್ಬರ: ಬರದಿಂದಾಗಿ ಕೃಷಿ ಉತ್ಪನ್ನಗಳ ಉತ್ಪಾದನೆ ಕಡಿಮೆಯಾಗಿ ಬೆಲೆ ಏರಿಕೆಯಾಗುತ್ತದೆ. ಈಗಾಗಲೇ ಅಕ್ಕಿ, ತೊಗರಿ ಸೇರಿ ಬಹುತೇಕ ಬೇಳೆ ಕಾಳುಗಳ ಬೆಲೆ ಹೆಚ್ಚಳವಾಗಿದೆ. ಇದು ಇನ್ನಷ್ಟು ಜಾಸ್ತಿಯಾಗಿ ಗ್ರಾಹಕರಿಗೆ ಸಮಸ್ಯೆ ತರಲಿದೆ. ಜತೆಗೆ, ಹಣದುಬ್ಬರ ಹೆಚ್ಚಿಸುವ ಸಾಧ್ಯತೆಗಳಿವೆ. ಈಗ ಆಹಾರದ ಹಣದುಬ್ಬರದ ಪ್ರಮಾಣ ಶೇ.9.94, ಚಿಲ್ಲರೆ ಹಣದುಬ್ಬರ ಶೇ.6.83 ಹಾಗೂ ಒಟ್ಟಾರೆ ಹಣದುಬ್ಬರ 6.83 ರಷ್ಟು ಇದೆ.
ಜಿಲ್ಲಾ ಜಿಡಿಪಿಗೆ ಕೃಷಿ ಕೊಡುಗೆ: ಜಿಲ್ಲಾಮಟ್ಟದಲ್ಲಿ ಆಂತರಿಕ ಉತ್ಪನ್ನ ದರಕ್ಕೆ ಕೃಷಿ ವಲಯದಿಂದ ಅತಿ ಹೆಚ್ಚು ಕೊಡುಗೆ ನೀಡುವ ಜಿಲ್ಲೆಗಳೆಂದರೆ ಕೊಡಗು ಶೇ.49, ದಾವಣಗೆರೆ ಶೇ.35.3, ಚಿತ್ರದುರ್ಗ ಶೇ.35.3, ಯಾದಗಿರಿ ಶೇ.33.9 ಹಾಗೂ ಕೊಪ್ಪಳ ಶೇ.33 ರಷ್ಟು ಇದೆ. ಉಳಿದ ಜಿಲ್ಲೆಗಳಲ್ಲಿಯೂ ಕೊಡುಗೆ ಇದೆ. ಆದರೆ, ಮಳೆ ಇಲ್ಲದಿರುವುದರಿಂದ ಕಡಿಮೆಯಾಗಲಿದೆ.
ರಫ್ತು ಕುಸಿತ: ರಾಜ್ಯದ ಕೃಷಿ ಉತ್ಪನ್ನದ ರಫ್ತಿನ ಪ್ರಮಾಣ ಸರಾಸರಿ 1,300 ಮಿಲಿಯನ್ ಡಾಲರ್ಗಳಷ್ಟಿದೆ. ಆದರೆ ಬರದಿಂದಾಗಿ ಈ ವರ್ಷ ಪ್ರಮಾಣ ಇಳಿಕೆಯಾಗುವ ಸಾಧ್ಯತೆಗಳಿವೆ.
- ಹಣದುಬ್ಬರ ಹೆಚ್ಚಳ, ಅಗತ್ಯವಸ್ತುಗಳ ಬೆಲೆಗಳೂ ಏರಿಕೆ ಆತಂಕ
- ಭತ್ತ ಸೇರಿ ಆಹಾರಧಾನ್ಯಗಳ ಉತ್ಪಾದನೆ ಗಣನೀಯ ಇಳಿಕೆ ಸಾಧ್ಯತೆ
- ಜಿಎಸ್ಡಿಪಿ 25 ಲಕ್ಷ ಕೋಟಿ ರೂ.ಗಳಿದ್ದು, 83 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಳ
ಮಳೆ ಇಲ್ಲದೇ ಕೃಷಿ ಉತ್ಪನ್ನಗಳ ಉತ್ಪಾದನೆ ಮೇಲೆ ಪರಿಣಾಮವಾಗಿದೆ. ಬೆಲೆಗಳು ಹೆಚ್ಚಾದರೆ ಬಡವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಕೃಷಿ ಉತ್ಪನ್ನಗಳ ದಾಸ್ತಾನು ನೀತಿಯನ್ನು ಇನ್ನಷ್ಟು ಗಟ್ಟಿ ಮಾಡಬೇಕು. ಗ್ಯಾರಂಟಿಗಳ ಮೂಲಕ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
| ಡಾ. ಅಬ್ದುಲ್ ಅಜೀಜ್, ಹಿರಿಯ ಅರ್ಥಶಾಸ್ತ್ರಜ್ಞ
ಈಗಾಗಲೇ ಹಣದುಬ್ಬರ ಹೆಚ್ಚಾಗಿದೆ. ಕೃಷಿ ಉತ್ಪನ್ನಗಳ ಮೇಲೆ ಬಿದ್ದಿರುವ ಪರಿಣಾಮ ರಾಜ್ಯದ ಆರ್ಥಿಕತೆಯ ಮೇಲೆ ಇನ್ನಷ್ಟು ಸಮಸ್ಯೆ ಸೃಷ್ಟಿಸಲಿದೆ. ಸರ್ಕಾರ ಬಹಳ ಎಚ್ಚರಿಕೆಯಿಂದ ಹೆಜ್ಜೆಯನ್ನಿಡಬೇಕಾಗಿದೆ. ಏಕೆಂದರೆ ಜನರ ಆದಾಯ ಈಗಾಗಲೇ ಕುಸಿದಿದೆ. ಇನ್ನಷ್ಟು ಕಡಿಮೆಯಾದರೆ ಕಷ್ಟದ ಪರಿಸ್ಥಿತಿ ನಿರ್ಮಾಣ.
| ಡಾ. ಕೃಷ್ಣರಾಜ್, ಪ್ರಾಧ್ಯಾಪಕ, ಸಾಮಾಜಿಕ, ಆರ್ಥಿಕ ಬದಲಾವಣೆ ಸಂಸ್ಥೆ
ಬರದಿಂದಾಗಿ ಆಹಾರ ಧಾನ್ಯ ಉತ್ಪಾದನೆ ಕಡಿಮೆಯಾಗಿರುವುದು ನಾವು ಬೇರೆ ರಾಜ್ಯಗಳ ಮೇಲೆ ಅವಲಂಬನೆಯಾಗುವ ಪರಿಸ್ಥಿತಿ ಸೃಷ್ಟಿಸಬಹುದು. ಜಿಎಸ್ಡಿಪಿ ಕಡಿಮೆಯಾಗಿ ಬಾಹ್ಯಸಾಲಕ್ಕೂ ಮೊರೆ ಹೋಗಬೇಕಾಗಬಹುದು.
| ಡಾ. ಪವಿತ್ರ ಆರ್.ಎಚ್., ಅರ್ಥಶಾಸ್ತ್ರ ಪ್ರಾಧ್ಯಾಪಕಿ, ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು
ಕೃಷಿ ಉತ್ಪಾದನೆ ಕುಸಿತ: ಕೃಷಿ ಭೂಮಿ ಕಡಿಮೆಯಾಗುತ್ತಿರುವ ಪರಿಣಾಮ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಕೃಷಿ ಉತ್ಪನ್ನದ ಉತ್ಪಾದನೆ ಸಾಧ್ಯವಿಲ್ಲ. ಅಂದಾಜು 130 ದಶಲಕ್ಷ ಟನ್ ಉತ್ಪಾದನೆಯ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಅದರಲ್ಲಿ ಮುಂಗಾರಿನ ಪಾಲು ಹೆಚ್ಚು. ಆದರೆ ಹಸಿರು ಬರ ಇರುವುದರಿಂದ ಉತ್ಪಾದನೆ ಶೇ.40ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆಗಳನ್ನು ಕೃಷಿ ತಜ್ಞರು ಗುರುತಿಸುತ್ತಾರೆ. ಬರದಿಂದಾಗಿ 30.74 ಲಕ್ಷ ಹೆಕ್ಟೇರ್ನಲ್ಲಿ ಕೃಷಿ ಬೆಳೆ ಹಾಗೂ 1.82 ಲಕ್ಷ ಹೆಕ್ಟೇರ್ನಲ್ಲಿ ತೋಟಗಾರಿಕೆ ಬೆಳೆ ಹಾಳಾಗಿದೆ.
ಎಷ್ಟಿದೆ ಜಿಎಸ್ಡಿಪಿ ಪ್ರಮಾಣ?: ರಾಜ್ಯದ ಜಿಎಸ್ಡಿಪಿ ಈಗ 25.7 ಲಕ್ಷ ಕೋಟಿ ರೂ. ಆಗಿದೆ. ಅದನ್ನು ಒಂದು ಟ್ರಿಲಿಯನ್ ಡಾಲರ್ಗೆ ಏರಿಕೆ ಮಾಡುವುದೆಂದರೆ ಮುಂದಿನ ಐದು ವರ್ಷಗಳಲ್ಲಿ 83 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸುವುದಾಗಿದೆ. ಅಂದರೆ ಸರಿಸುಮಾರು ಮೂರು ಪಟ್ಟು ಹೆಚ್ಚು ಮಾಡಬೇಕಾಗಿದೆ. ಜಿಎಸ್ಡಿಪಿಯ ಬೆಳವಣಿಗೆ ದರ 2021-22 ರಲ್ಲಿ ಶೇ.11 ರಷ್ಟು ಇತ್ತು. ಆದರೆ, ಅದು 2022-23ಕ್ಕೆ ಶೇ.7.9ಕ್ಕೆ ಕುಸಿದಿತ್ತು. ಈ ಆರ್ಥಿಕ ವರ್ಷಕ್ಕೆ ಶೇ.13 ರಿಂದ 17 ರಷ್ಟು ಆಗಬಹುದೆಂದು ಸರ್ಕಾರ ಅಂದಾಜು ಮಾಡಿದೆ. ಆದರೆ, ಬರದಿಂದಾಗಿ ಆ ಪ್ರಮಾಣದ ಏರಿಕೆ ಸಾಧ್ಯತೆಗಳಿಲ್ಲ ಎಂದೇ ಹೇಳಲಾಗುತ್ತಿದೆ.
ಪ್ರಧಾನಿ ಮೋದಿಯನ್ನು ‘ಖಿಲಾಡಿ ನಂ. 1’ ಎಂದು ಕರೆದ ನಟ ಪ್ರಕಾಶ್ ರಾಜ್