ಕೃಷಿ ಕ್ರಾಂತಿಗೆ ಹೊಸ ನೀತಿ

|ರುದ್ರಣ್ಣ ಹರ್ತಿಕೋಟೆ

ಬೆಳಗಾವಿ: ಬರಗಾಲ, ಬೆಳೆ ಸಾಲದಂತಹ ಸರಣಿ ಸಂಕಷ್ಟಗಳಿಗೆ ಸಿಲುಕಿ ಕೃಷಿ ಮೇಲೆ ವೈರಾಗ್ಯ ಹೊಂದುತ್ತಿರುವ ರೈತರಲ್ಲಿ ಆತ್ಮವಿಶ್ವಾಸ ಬಿತ್ತಿ, ಬದುಕು ಕಟ್ಟಲು ನೆರವಾಗುವ ಉದ್ದೇಶದಿಂದ ಹೊಸ ಕೃಷಿ ನೀತಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರ ಬೆಳೆಗೆ ವರ್ಷ ಮೊದಲೇ ಬೆಲೆ ನಿಗದಿ ಮಾಡಿ ದುಪ್ಪಟ್ಟು ಆದಾಯ ಕೊಡಿಸಲು ಸರ್ಕಾರ ಹೊಸ ಕೃಷಿ ನೀತಿ ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ರಾಜ್ಯದಲ್ಲಿ ಗ್ರಾಹಕ ಸೂಚ್ಯಂಕ ನಿರಂತರ ಏರಿಕೆಯಾಗುತ್ತಿದ್ದರೆ ಕೃಷಿಕರ ಆದಾಯ ಇನ್ನೂ ನಿಂತ ನೀರಿನಂತಾಗಿದೆ. ಜಿಎಸ್​ಡಿಪಿಗೆ ಕೃಷಿ ಕೊಡುಗೆ ದಿನೇ ದಿನೆ ಕಡಿಮೆಯಾಗುತ್ತಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಮುಂದಿನ ವರ್ಷ ಕೃಷಿ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ 2006ರಲ್ಲಿ ಜಾರಿಗೆ ಬಂದ ಕೃಷಿ ನೀತಿಯ ಮತ್ತೊಂದು ಅವಧಿ 2016ಕ್ಕೆ ಬಂದಿದೆ. ಹಿಂದಿನ ಸರ್ಕಾರ ದೇಶದಲ್ಲೇ ಮೊದಲನೆಯದಾದ ಸಾವಯವ ಕೃಷಿ ನೀತಿ ಜತೆಗೆ ಕೃಷಿ ರಫ್ತು ನೀತಿಯನ್ನೂ ತಂದಿತ್ತು. ಇದೀಗ ರಾಜ್ಯ ಸರ್ಕಾರ ಕೃಷಿಯ ಸಮಗ್ರ ಬೆಳವಣಿಗೆಯತ್ತ ಚಿತ್ತ ಹರಿಸುವ ಮೂಲಕ ರೈತರನ್ನು ಆತ್ಮಹತ್ಯೆಯಿಂದ ದೂರ ಮಾಡಿ ಅವರಲ್ಲಿ ಕೃಷಿಯ ಬಗ್ಗೆ ವಿಶ್ವಾಸ ಮೂಡಿಸಲು ಹೊಸ ನೀತಿ ರೂಪಿಸುತ್ತಿದೆ.

ಗೋದಾಮು ನಿರ್ವಣ: ವ್ಯಾಪಾರಿಗಳು ಮೋಸ ಮಾಡಿ ಬೆಲೆ ತಗ್ಗಿಸುವ ಸಂದರ್ಭದಲ್ಲಿ ರೈತರಿಗೆ ತಮ್ಮಕೃಷಿ ಉತ್ಪನ್ನವನ್ನು ಕಾಯ್ದಿರಿಸಲು ಗೋದಾಮುಗಳ ಅಗತ್ಯವಿರುತ್ತದೆ. ಆದ್ದರಿಂದ ಪ್ರತಿ 5 ಕಿಮೀಗಳಿಗೆ ಒಂದರಂತೆ ಗೋದಾಮು ನಿರ್ವಣ, ಅಲ್ಲಿ ತಂದಿಡುವ ಉತ್ಪನ್ನಗಳಿಗೆ ಅರ್ಧದಷ್ಟು ಹಣವನ್ನು ಸರ್ಕಾರವೇ ಪಾವತಿಸುವುದು, ಉತ್ತಮ ಬೆಲೆ ಸಿಕ್ಕಾಗ ರೈತರು ಸರ್ಕಾರದ ಹಣ ವಾಪಸ್ ಮಾಡುವುದು ಎಂಬ ಅಂಶಗಳು ನೀತಿಯಲ್ಲಿ ಆದ್ಯತೆ ಪಡೆಯಲಿವೆ.

ಉತ್ಪನ್ನಗಳಿಗೆ ದುಪ್ಪಟ್ಟು ಬೆಲೆ ನಿಗದಿ

ಖರ್ಚಿನ ಆಧಾರದಲ್ಲಿ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಬೇಕೆಂಬ ರೈತರ ಬೇಡಿಕೆಗೆ ಹೊಸ ನೀತಿಯಲ್ಲಿ ಆದ್ಯತೆ ಸಿಗುತ್ತಿದೆ. ಎಲ್ಲ ಬೆಳೆಗೂ ವರ್ಷ ಮುನ್ನವೇ ಖರ್ಚಿನ ಆಧಾರದಲ್ಲಿ ಬೆಲೆ ನಿಗದಿ ಮಾಡಲಾಗುತ್ತದೆ. ಅಷ್ಟೇ ಬೆಳೆಯನ್ನು ವ್ಯಾಪಾರಿಗಳು ನೀಡಲೇಬೇಕು. ಇಲ್ಲದಿದ್ದರೆ ವ್ಯಾಪಾರಿಗಳ ವಿರುದ್ಧ ಶಿಸ್ತುಕ್ರಮಕ್ಕೂ ಆದ್ಯತೆ ನೀಡಲಾಗುತ್ತದೆ. ರೈತರ ಆದಾಯ ಈಗ ಇರುವುದಕ್ಕಿಂತ ದ್ವಿಗುಣವಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.

ರೈತ ಸಮಿತಿ ಚರ್ಚೆ

ಸರ್ಕಾರ ಈಗಾಗಲೇ ಪ್ರತಿ ಜಿಲ್ಲೆಗೆ ಇಬ್ಬರಂತೆ 60 ರೈತರು, ತಜ್ಞರು, ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿದ್ದು, ನೀತಿಯಲ್ಲಿ ರಬೇಕಾದ ಅಂಶಗಳ ಬಗ್ಗೆ ಚರ್ಚೆ ನಡೆಸುತ್ತಿದೆ. ಬಜೆಟ್ ವೇಳೆಗೆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ಬಜೆಟ್ ನಂತರ ಹೊಸ ನೀತಿ ಜಾರಿಗೆ ಬರಲಿದೆ.

ಕೃಷಿ ಕ್ಷೇತ್ರದಲ್ಲಿ ಒಂದಷ್ಟು ಕ್ರಾಂತಿಕಾರಕ ಬದಲಾವಣೆ ತರುವ ಮೂಲಕ ರೈತರ ಸಮಸ್ಯೆಗಳನ್ನು ಹೋಗಲಾಡಿಸುವ ಉದ್ದೇಶ ಹೊಂದಲಾಗಿದೆ. ಆದ್ದರಿಂದಲೇ ಮುಂದಿನ ವರ್ಷ ಹೊಸ ಕೃಷಿ ನೀತಿ ತರಲಾಗುತ್ತದೆ.

| ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

ಹವಾಮಾನ ಆಧಾರಿತ ಬೆಳೆ

ರಾಜ್ಯದಲ್ಲಿ ಆರು ಹವಾಮಾನ ಆಧಾರಿತ ಪ್ರದೇಶಗಳಿದ್ದು, ಹೊಸ ನೀತಿಯ ಪ್ರಕಾರ ಅದರ ಆಧಾರದಲ್ಲಿಯೇ ಯಾವ ಬೆಳೆ ಬೆಳೆಯಬೇಕು, ಯಾವ ಪ್ರದೇಶ ಎಂಬುದನ್ನು ನಿಗದಿ ಮಾಡಲಾಗುತ್ತದೆ. ಒಂದೇ ಬೆಳೆ ಹೆಚ್ಚಿಗೆ ಬೆಳೆದು ರೈತರು ಬೆಲೆ ಕುಸಿಯದಂತೆ ನೋಡಿಕೊಳ್ಳುವುದು ಇದರ ಉದ್ದೇಶ. ಇದಕ್ಕಾಗಿಯೇ ಜಿಲ್ಲೆಗೆ ಅಗತ್ಯವಿರುವಷ್ಟು ಬೆಳೆಯನ್ನು ನಿಗದಿ ಮಾಡುವ ಉದ್ದೇಶವೂ ಇದೆ. ನಿಗದಿತ ಬೆಳೆ ಹೊರತು ಬೇರೆ ಬೆಳೆ ಬೆಳೆಯುವ ರೈತರಿಗೆ ಸಹಾಯಧನಗಳನ್ನು ನೀಡುವುದಿಲ್ಲ ಎಂಬ ಅಂಶವನ್ನು ಸೇರಿಸಲಾಗುತ್ತದೆ.

ನೀತಿಯ ಪ್ರಮುಖಾಂಶ

  • ಇಸ್ರೇಲ್ ತಂತ್ರಜ್ಞಾನ ಹಾಗೂ ಶೂನ್ಯ ಬಂಡವಾಳ ಕೃಷಿ ಯೋಜನೆ
  • ಹವಾಮಾನ ಹಾಗೂ ಪ್ರದೇಶ ಆಧಾರಿತ ಕೃಷಿ ಪದ್ಧತಿ
  • ಭೂಮಿಯ ಸದ್ಬಳಕೆ, ಫಲವತ್ತತೆ ಹೆಚ್ಚಳ
  • ನಿಗದಿತ ಬೆಳೆ ಬಿಟ್ಟು ಬೇರೆ ಬೆಳೆದರೆ ಸಹಾಯಧನ ರದ್ದು
  • ವರ್ಷಕ್ಕೂ ಮೊದಲೇ ಬೆಳೆಗೆ ಬೆಲೆ ನಿಗದಿ, ಹನಿ ನೀರಾವರಿ ಪ್ರಮಾಣ ಹೆಚ್ಚಳ
  • ಕೃಷಿ ವಿವಿಗಳ ಬಲವರ್ಧನೆ
  • ಗೋದಾಮುಗಳ ಸಂಖ್ಯೆಹೆಚ್ಚಳ

ಸರ್ಕಾರದಿಂದ ನೆರವು

ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ರೈತರಿಗೆ ನಷ್ಟ ತುಂಬಿ ಕೊಡುವ ಯೋಜನೆಯೊಂದನ್ನು ಜಾರಿಗೆ ತರಲು ಹೊಸ ಕೃಷಿ ನೀತಿಯಲ್ಲಿ ಸೇರಿಸಲಾಗುತ್ತದೆ. ಹನಿ ನೀರಾವರಿ ಮೂಲಕ ನೀರಿನ ಸದ್ಬಳಕೆ ಹಾಗೂ ಮಿತವ್ಯಯ ಮಾಡುವುದು ಸಹ ಸರ್ಕಾರದ ಆದ್ಯತೆಯಾಗಿರುತ್ತದೆ. ಶೂನ್ಯ ಬಂಡವಾಳ ಕೃಷಿ ಪದ್ಧತಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಣೆ ಮಾಡಲಾಗುತ್ತದೆ.

ಸಂಸ್ಕರಣೆ

ಕೃಷಿ ಉತ್ಪನ್ನಗಳನ್ನು ಎಪಿಎಂಸಿಗಳಲ್ಲಿಯೇ ಮಾರಾಟ ಮಾಡಬೇಕು. ಸಂಸ್ಕರಣೆಗೆ ಒತ್ತು ನೀಡಬೇಕು ಎಂಬ ನಿಟ್ಟಿನಲ್ಲಿ ಕೃಷಿಕರ ನೆರವಿಗೆ ಸರ್ಕಾರ ಮುಂದಾಗಲಿದೆ.

ವಿವಿಗಳ ಬಲವರ್ಧನೆ

ಕೃಷಿ ವಿಶ್ವವಿದ್ಯಾಲಗಳನ್ನು ಇನ್ನಷ್ಟು ಬಲ ಪಡಿಸುವ ನಿಟ್ಟಿನಲ್ಲಿ ಈಗಾಗಲೇ ಅಧ್ಯಯನ ನಡೆದಿದೆ. ಅಲ್ಲಿ ರೈತ ಪರ ಸಂಶೋಧನೆಗಳನ್ನು ಹೆಚ್ಚಿಸುವ ಮೂಲಕ ಲ್ಯಾಬ್ ಟು ಲ್ಯಾಂಡ್ ಪರಿಕಲ್ಪನೆಗೆ ಬಲ ತುಂಬುವುದು ಸರ್ಕಾರದ ಉದ್ದೇಶವಾಗಿದೆ.

ಸಹಕಾರ ಕೃಷಿ

ಸಹಕಾರ ವಲಯದ ಮೂಲಕವೂ ಕೃಷಿಗೆ ಆದ್ಯತೆ ನೀಡಲಾಗುತ್ತದೆ. ರೈತರು ಸಹಕಾರ ಸಂಘಗಳನ್ನು ರಚನೆ ಮಾಡಿಕೊಂಡು ಕೃಷಿ ಚಟುವಟಿಕೆಗಳನ್ನು ಕೈಗೊಂಡರೆ ಸಹಕಾರ ಇಲಾಖೆಯ ಮೂಲಕ ನೆರವು ನೀಡುವುದು ಸರ್ಕಾರದ ಉದ್ದೇಶವಾಗಿದೆ.