ಹೊರನಾಡು-ಸುಬ್ರಹ್ಮಣ್ಯ ರಸ್ತೆ ನಿರ್ಮಾಣ

ಕಳಸ: ಹೊರನಾಡು- ಸುಬ್ರಹ್ಮಣ್ಯ ರಸ್ತೆ ನಿರ್ಮಾಣ ಕಾಮಗಾರಿಯನ್ನು ಮತ್ತೆ ಕೈಗೆತ್ತಿಕೊಳ್ಳುತ್ತೇನೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಭರವಸೆ ನೀಡಿದರು.

ಹೊರನಾಡು- ಬಲಿಗೆ, ಮೆಣಸಿನಹಾಡ್ಯ-ಕೊಗ್ರೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಾನು ಈ ಹಿಂದೆ ಮಂತ್ರಿಯಾಗಿದ್ದಾಗ ಹೊರಾನಡು-ಸುಬ್ರಹ್ಮಣ್ಯ ರಸ್ತೆಗೆ 280 ಕೋಟಿ ರೂ. ಅನುದಾನ ಇಟ್ಟಿದ್ದೆ. ನಾನು ಮಂತ್ರಿ ಸ್ಥಾನದಿಂದ ಇಳಿದ ಕೂಡಲೇ ಅನುದಾನವನ್ನೂ ತೆಗೆದುಹಾಕಲಾಗಿತ್ತು. ಈಗ ಮತ್ತೆ ಆರಂಭಿಸುತ್ತೇನೆ ಎಂದರು.

ಪಕ್ಷಗಳು ನನಗೆ ಮುಖ್ಯವಲ್ಲ. ಜನರ ಬೇಡಿಕೆ ಈಡೇರಿಸುವುದು ಮುಖ್ಯ. ಕಾಮಗಾರಿಗೆ ಅನುಮತಿ ಸಿಗದೆ ಯಾವುದೇ ಕೆಲಸಕ್ಕೂ ಗುದ್ದಲಿ ಪೂಜೆ ಮಾಡಲ್ಲ. 4.5 ಕೋಟಿ ರೂ. ವೆಚ್ಚದ ಹೊರನಾಡು- ಬಲಿಗೆ- ಕೊಗ್ರೆ ರಸ್ತೆ ಕಾಮಗಾರಿ ಆರಂಭವಾಗಲಿದೆ. ಜಿಲ್ಲೆಯಲ್ಲಿ 386 ಸೇತುವೆ ನಿರ್ವಿುಸುತ್ತಿದ್ದು, ಎಲ್ಲಿ ಅನಿವಾರ್ಯವಿದೆಯೋ ಅಲ್ಲಿ ಕೆಲಸ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಇಲ್ಲಿಯ ಸಂಸೆ- ಎಳೆನೀರು- ದಿಡುಪೆ ರಸ್ತೆಯ ಬೇಡಿಕೆ ಇದೆ. ಆದರೆ ಅಲ್ಲಿ 7 ಕಿಮೀ ಅರಣ್ಯ ಇದೆ. ಅರಣ್ಯ ಇಲಾಖೆ ಜತೆ ರ್ಚಚಿಸಿ ರಸ್ತೆ ನಿರ್ವಿುಸಲು ಅನುದಾನ ನೀಡುತ್ತೇನೆ. ಇಲ್ಲಿಯ ಬಹುದಿನದ ಬೇಡಿಕೆಯಾಗಿದ್ದ ಕಳಸ ತಾಲೂಕು ಕೇಂದ್ರ ರಚನೆಗೆ ಪ್ರತಿಯೊಬ್ಬ ರಾಜಕೀಯ ಮುಖಂಡರು ಒತ್ತಡ ಹಾಕಿದ್ದರು. ಈಗ ಬೇಡಿಕೆ ಈಡೇರಿಸಲಾಗಿದೆ ಎಂದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ನೀಡಿದ ರೇವಣ್ಣ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಕ್ಕಳಿಗೆ ಪರೀಕ್ಷೆ ಸಂದರ್ಭವಾದ್ದರಿಂದ ದಿನಕ್ಕೆ 15 ತಾಸು ವಿದ್ಯುತ್ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.

ಎಂಎಡಿಬಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಮಾತನಾಡಿ, ಮಂಡಳಿಗೆ ಮುಂದಿನ ಬಜೆಟ್​ನಲ್ಲಿ ಕನಿಷ್ಠ 150 ಕೋಟಿ ರೂ. ಮೀಸಲಿಡಬೇಕು. ಕ್ಷೇತ್ರದ ಅಭಿವೃದ್ಧಿಗೆ 300 ಕೋಟಿ ರೂ. ನೀಡಿರುವುದು ಶ್ಲಾಘನೀಯ ಎಂದರು