ಕಾರಿಗಾಗಿ ಚಾಲಕನ ಬರ್ಬರ ಹತ್ಯೆ

ಬೆಂಗಳೂರು: ನೆಲಮಂಗಲದ ಹೊರವಲಯದಲ್ಲಿ ಇನ್ನೋವಾ ಕಾರಿಗಾಗಿ ಚಾಲಕನೊಬ್ಬನನ್ನು ಸುಟ್ಟು ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ತುಮಕೂರು ನಿವಾಸಿ ಕೆಂಪೇಗೌಡ (38) ಮೃತ. ಈತ ಬೆಂಗಳೂರಿನ ಖಾಸಗಿ ಕಂಪನಿಯೊಂದಕ್ಕೆ ಕಾರನ್ನು ನೋಂದಾಯಿಸಿಕೊಂಡು ಜೀವನ ಸಾಗಿಸುತ್ತಿದ್ದ. ಶನಿವಾರ ಹಾಗೂ ಭಾನುವಾರ ಕಂಪನಿಗೆ ರಜೆ. ಹಾಗಾಗಿ ಮೇ 17 ರಂದು ಊಟಿಗೆ ಬಾಡಿಗೆಗೆ ಹೋಗುತ್ತಿದ್ದೇನೆ ಎಂದು ಕೆಂಪೇಗೌಡ ಪೋನ್ ಮಾಡಿ ತಮ್ಮ ಮನೆಯವರಿಗೆ ತಿಳಿಸಿದ್ದ. ಆದರೆ ಎರಡು ದಿನ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಮನೆಯವರು ಹೆಬ್ಬಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸೋಮವಾರ ಶವ ಪತ್ತೆಯಾಗಿತ್ತು. ನೆಲಮಂಗಲದ ನೀಲಗಿರಿ ತೋಪಿನಲ್ಲಿ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಲಾಗಿತ್ತು. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಕಾರು ಹಾಗೂ ಹಣಕ್ಕಾಗಿ ಅಪಹರಿಸಿ ಕೊಲೆ ಮಾಡಿದ್ದೇವೆ ಎಂದು ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ನೆಲಮಂಗಲ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.