ಭೂತನಘಾಟಿ ಸಮೀಪ ಬಸ್​ಗೆ ಎದುರಾದ ಒಂಟಿ ಸಲಗ

ತರೀಕೆರೆ: ಸಂತವೇರಿ ಗ್ರಾಮ ಸಮೀಪದ ಭೂತನಘಾಟಿ ಬಳಿ ಚಲಿಸುತ್ತಿದ್ದ ಬಸ್​ಗೆ ಶನಿವಾರ ಸಂಜೆ ಒಂಟಿ ಸಲಗವೊಂದು ಎದುರಾಗಿ ಪ್ರಯಾಣಿಕರು ಕೆಲಕ್ಷಣ ಆತಂಕಗೊಂಡಿದ್ದರು.

ತರೀಕೆರೆಯಿಂದ ಚಿಕ್ಕಮಗಳೂರಿಗೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್​ಗೆ ಒಂಟಿ ಸಲಗವೊಂದು ಎದುರಾಗಿ ಚಾಲಕ ಮಾತ್ರವಲ್ಲದೆ, ಪ್ರಯಾಣಿಕರೂ ಭಯಗೊಂಡಿದ್ದರು.

ಭೂತನಘಾಟಿ ತಿರುವಿನಲ್ಲಿ ಆನೆ ಪ್ರತ್ಯಕ್ಷವಾಗುತ್ತಿದ್ದಂತೆ ಸಮಯ ಪ್ರಜ್ಞೆ ತೋರಿದ ಚಾಲಕ ಬಸ್ ಅನ್ನು 2 ಕಿಮೀಗೂ ಹೆಚ್ಚು ದೂರ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ಅನಾಹುತ ತಪ್ಪಿಸಿದ್ದಾರೆ. ಬಸ್​ಗೆ ಒಂಟಿ ಸಲಗ ಎದುರಾಗುವ ಮುನ್ನ ಈ ಮಾರ್ಗದಲ್ಲಿ್ಲ ಕಲ್ಲಂಗಡಿ ತುಂಬಿದ ವಾಹನ ಸಂಚರಿಸಿದ್ದು, ಆನೆ ವಾಹನದಿಂದ ಹಣ್ಣಿನ ಚೀಲವನ್ನು ಉರುಳಿಸಿ ತಿಂದು ಹಾಕಿದೆ.

ಭೂತನಘಾಟಿ ತಿರುವಿನ ಮೇಲೆ ಗಂಗೂರು ಮೀಸಲು ಅರಣ್ಯ ಪ್ರದೇಶವಿದ್ದರೆ, ರಸ್ತೆ ಕೆಳಭಾಗದಲ್ಲಿ ಉಡೇವಾ ಮೀಸಲು ಅರಣ್ಯ ಪ್ರದೇಶವಿದೆ. ಉಡೇವಾ ಅರಣ್ಯದಲ್ಲಿ ಆನೆ ಕಾರಿಡಾರ್ ಹಾದುಹೋಗಿದೆ. ರಸ್ತೆಯಲ್ಲಿ ಕಬ್ಬು ತುಂಬಿದ ಲಾರಿಗಳ ಓಡಾಟ ಹೆಚ್ಚಾಗಿರುವುದರಿಂದ ಆನೆಗಳು ಕಬ್ಬಿನ ಆಸೆಗೆ ರಸ್ತೆಗೆ ಬರಲಾರಂಭಿಸಿವೆ. ಪ್ರಯಾಣಿಕರು ಎಚ್ಚರದಿಂದ ಸಂಚರಿಸಬೇಕು ಎಂದು ತರೀಕೆರೆ ವಲಯ ಅರಣ್ಯಾಧಿಕಾರಿ ಎಂ.ವಿ.ಚರಣ್​ಕುಮಾರ್ ತಿಳಿಸಿದ್ದಾರೆ.