ಬೆಂಗಳೂರು: ಲೆಕ್ಕಪರಿಶೋಧಕರ ಬಳಿ 1.50 ಕೋಟಿ ರೂ. ದೋಚಿದ್ದ ಕಾರು ಚಾಲಕನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.

ವೈಯಾಲಿಕಾವಲ್ ನಿವಾಸಿ ರಾಜೇಶ್ ಬಂಧಿತ ಚಾಲಕ. ಸಿಎ ತೋಟಪ್ರಸಾದ್‌ಯಿಂದ ಕಳವು ಮಾಡಿದ್ದ 1.48 ಕೋಟಿ ರೂ. ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ತಮ್ಮ ಕ್ಲೈಂಟ್‌ಗೆ ಸೇರಿದ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡಬೇಕು. ಹಣವನ್ನು ಕಾರಿನಲ್ಲಿ ಇಡಲು ಚಾಲಕನಿಗೆ ಸಿಎ ತೋಟಪ್ರಸಾದ್ ಕೊಟ್ಟಿದ್ದರು.
ಕಾರಿನಲ್ಲಿ ಇಡದೆ ಹಣವನ್ನು ತೆಗೆದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದ. ಈ ಬಗ್ಗೆ ಸಿಎ ನೀಡಿದ ದೂರಿನ ಮೇರೆಗೆ ತನಿಖೆಗೆ ಇಳಿದ ಪೊಲೀಸರು, ಆರೋಪಿಯನ್ನು ಪತ್ತೆಹಚ್ಚಿ ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟಿದ್ದರು. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಬಳಿಕ ಆತನ ಬಂಧನವಾಗಿದೆ.
ಆಂಧ್ರಪ್ರದೇಶ ಮೂಲದ ರಾಜೇಶ್, ಹಲವು ವರ್ಷಗಳಿಂದ ವೈಯಾಲಿಕಾವಲ್‌ನಲ್ಲಿ ತನ್ನ ಕುಟುಂಬದ ಜತೆ ವಾಸವಾಗಿದ್ದಾನೆ. ಹತ್ತು ವರ್ಷಗಳಿಂದ ಕೋದಂಡರಾಮಪುರದ ನಿವಾಸಿ ಸಿಎ ತೋಟಪ್ರಸಾದ್ ಅವರ ಬಳಿ ಕಾರು ಚಾಲಕನಾಗಿ ರಾಜೇಶ್ ಕೆಲಸ ಮಾಡುತ್ತಿದ್ದ. ತನ್ನ ಕರ್ತವ್ಯನಿರ್ವಹಣೆಯಿಂದ ಆತ ಮಾಲೀಕರ ವಿಶ್ವಾಸ ಸಹ ಗಳಿಸಿದ್ದ. ಹಣದಾಸೆಗೆ ರಾಜೇಶ್, ಮೇ 6ರಂದು ಹಣ ದೋಚಿ ಆಂಧ್ರದ ಶ್ರೀಶೈಲಕ್ಕೆ ಪರಾರಿಯಾಗಿದ್ದ. ಕೊನೆಗೆ ಪೊಲೀಸರು ಪತ್ತೆಹಚ್ಚಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.