ಪಾರಂಪರಿಕ ಆಟಗಳ ಪ್ರದರ್ಶನಕ್ಕೆ ಚಾಲನೆ

ಮೈಸೂರು: ರಾಮ್‌ಸನ್ಸ್ ಕಲಾ ಪ್ರತಿಷ್ಠಾನವು ಚಾಮರಾಜೇಂದ್ರ ಮೃಗಾಲಯದ ಎದುರಿನ ಹ್ಯಾಂಡಿಕ್ರಾಫ್ಟ್ ಸೇಲ್ಸ್ ಎಂಪೋರಿಯಮ್‌ನಲ್ಲಿ ಆಯೋಜಿಸಿರುವ ‘ಕ್ರೀಡಾ ಕೌಶಲ’ ಪಾರಂಪರಿಕ ಹಾಸು ಆಟಗಳ 8ನೇ ದ್ವೈವಾರ್ಷಿಕ ಪ್ರದರ್ಶನಕ್ಕೆ ಭಾನುವಾರ ಚಾಲನೆ ದೊರೆಯಿತು.ಪ್ರದರ್ಶನದಲ್ಲಿ ಜಾನಪದ ಆಟಗಳ ಕಲೆಯನ್ನು ಪರಿಚಯಿಸಲಾಗಿದೆ. ಪಾರಂಪರಿಕ ಆಟಗಳಿಗೆ ಕಲಾತ್ಮಕ ಸ್ಪರ್ಶ ನೀಡಿದ್ದು, ಸದಭಿರುಚಿಯ ವಿಶಿಷ್ಟ ಪ್ರಯೋಗವಾಗಿದೆ.

ಇಂದು ಮರೆಯಾಗುತ್ತಿರುವ ಅಳುಗಳಿ ಮನೆ, ಪಗಡೆ, ಚದುರಂಗ, ಚೌಕಬಾರ ಸೇರಿದಂತೆ ಕರಕುಶಲ ಕಲಾವಿದರಿಂದ ತಯಾರಾಗುತ್ತಿದ್ದ ಆಟದ ಮಣೆಗಳು, ದಾಳಗಳು ಪ್ರದರ್ಶನದಲ್ಲಿ ಆಕರ್ಷಿಸುತ್ತಿವೆ. ಆಸಕ್ತರು ಮೇ 5ರವರೆಗೆ ಬೆ. 10ರಿಂದ ಸಂಜೆ 7ರವರೆಗೆ ಪ್ರದರ್ಶನಕ್ಕೆ ಭೇಟಿ ನೀಡಬಹುದಾಗಿದೆ.

ಭಾನುವಾರ ಪ್ರದರ್ಶನಕ್ಕೆ ಪೊಲೀಸ್ ಪ್ರಶಿಕ್ಷಣ ವಿದ್ಯಾಲಯ ಪ್ರಾಚಾರ್ಯರಾದ ಡಾ.ಧರಣೀದೇವಿ ಮಾಲಗತ್ತಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಾಮ್‌ಸನ್ಸ್ ಕಲಾ ಪ್ರತಿಷ್ಠಾನವು ಸಾಂಸ್ಕೃತಿಕ ಪರಂಪರೆಯ ಕ್ರೀಡೆಗಳನ್ನು ಉಳಿಸಿಕೊಂಡು ಬಂದಿದ್ದು, ಅದನ್ನು ಯುವ ಸಮುದಾಯಕ್ಕೆ, ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರದರ್ಶನದಲ್ಲಿ ಮೈಸೂರು ಮತ್ತು ಭಾರತದ ಶ್ರೀಮಂತ ಪರಂಪರೆಯನ್ನು ಬಿಂಬಿಸಲಾಗಿದೆ. ಇದಕ್ಕೆ ಸಾಕಷ್ಟು ಪರಿಶ್ರಮ ವಹಿಸಲಾಗಿದೆ. ಜತೆಗೆ ಈ ಆಟಗಳಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ ಎಂದರು.

ಮಳವಳ್ಳಿ ಮಂಟೇಸ್ವಾಮಿ ಮಠಾಧಿಪತಿ ಎಸ್.ಎಸ್.ರಾಜೇ ಅರಸ್ ಮಾತನಾಡಿ, ಮೈಸೂರು ಪರಂಪರೆಯ ಆಟಗಳನ್ನು ಮರೆತೇ ಬಿಟ್ಟಿದ್ದೆವು. ಆಟದ ಮಣೆಗಳಿಗೆ ಕಲೆಯ ರೂಪ ನೀಡಲಾಗಿದೆ. ನೋಡಿ ಸಂತೋಷವಾಯಿತು. ಪ್ರಾಚೀನ ಆಟಗಳನ್ನು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವಂತಹ ನೀತಿಯನ್ನು ಜಾರಿಗೆ ತರಬೇಕು ಎಂದರು. ಪ್ರತಿಷ್ಠಾನದ ಅಧ್ಯಕ್ಷ ರಾಮ್ ಸಿಂಗ್, ಕಾರ್ಯದರ್ಶಿ ಆರ್.ಜಿ.ಸಿಂಗ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *