ಸವದತ್ತಿ: ವಲಯ ಮಟ್ಟದ ಕಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ

ಸವದತ್ತಿ: ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿ ಎಂದು ಕರೆದು ಇಲ್ಲಿ ಸುವರ್ಣಸೌಧವನ್ನು ಕಟ್ಟಿ ಈ ಭಾಗದ ಜನರಿಗೆ ಸರ್ಕಾರಿ ಸೌಲಭ್ಯಗಳು ಸಿಗಲು ಹಾಗೂ ಇಲಾಖೆಗಳ ಕಚೇರಿಗಳು ಸ್ಥಾಪಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಆದರೆ, ಸಮ್ಮಿಶ್ರ ಸರ್ಕಾರ ನಮ್ಮ ಕೂಗು ಕೇಳಿದರೂ ಸಹ ಕೇಳಿಸದಂತೆ ನಡೆದುಕೊಳ್ಳುತ್ತಿದೆ. ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸುವುದು ಖಂಡನೀಯ ಎಂದು ಶಾಸಕ ಆನಂದ ಮಾಮನಿ ಹೇಳಿದ್ದಾರೆ.

ಪಟ್ಟಣದ ಕೆ.ಎಂ.ಮಾಮನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಬೆಳಗಾವಿ ವಲಯ ಮಟ್ಟದ ಪುರುಷರ ಕಬಡ್ಡಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಕಾಲೇಜುಗಳಿಗೆ ಸೌಲಭ್ಯ ಕಲ್ಪಿಸದಿದ್ದರೂ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ನೀಡುತ್ತಿದ್ದೇವೆ. ಕೆ.ಎಂ.ಮಾಮನಿ ಹಾಗೂ ಯರಗಟ್ಟಿಯಲ್ಲಿ ಇರುವ ಸಿ.ಎಂ. ಮಾಮನಿ ಕಾಲೇಜುಗಳಿಗೆ ಸರ್ಕಾರದಿಂದ ಸೌಲಭ್ಯ ಸಿಗದಿದ್ದರೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಜಗದೀಶ ಗಸ್ತಿ ಮಾತನಾಡಿದರು. ಇದಕ್ಕೂ ಮುನ್ನ ಹುತಾತ್ಮ ವೀರಯೋಧರಿಗೆ ಮೌನಾಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಸಕ ಆನಂದ ಮಾಮನಿ ಧ್ವಜಾರೋಹಣ ನೆರವೇರಿಸಿದರು. ಸಿಪಿಐ ಎಂ.ಪಿ.ಸರವ್ವಗೋಳ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಜಗದೀಶ ಶಿಂತ್ರಿ, ಎಪಿಎಂಸಿ ಅಧ್ಯಕ್ಷ ಜಗದೀಶ ಹನಸಿ, ಪ್ರಾಂಶುಪಾಲ ಎಂ.ಬಿ.ಬಾಗಡಿ, ಡಾ.ಆರ್.ಎಲ್.ಕೊಪ್ಪದ, ಡಾ. ವಿದ್ಯಾ ಹಡಗಲಿ, ಡಾ. ಬಿ.ಎಂ.ವಾಲಿ, ಇತರರು ಉಪಸ್ಥಿತರಿದ್ದರು.