ಸುಂಟಿಕೊಪ್ಪ: ಪಟ್ಟಣದ ಉಲುಗುಲಿ ರಸ್ತೆ (ಮಾರುಕಟ್ಟೆ) ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ.ಚಂದ್ರಕಲಾ ಭಾನುವಾರ ಭೂಮಿಪೂಜೆ ನೆರವೇರಿಸಿದರು.
ಜಿಪಂನಿಂದ ಒಟ್ಟು 23 ಲಕ್ಷ ರೂ. ಬಿಡುಗಡೆಯಾಗಿದ್ದು, ಪಟ್ಟಣದ ರಾಮ ಬಡಾವಣೆಯ ರಸ್ತೆ ಅಭಿವೃದ್ಧಿಗೆ 16 ಲಕ್ಷ ರೂ. ಹಾಗೂ ಮರುಕಟ್ಟೆ ರಸ್ತೆ ಅಭಿವೃದ್ಧಿಗೆ 7 ಲಕ್ಷ ರೂ ಮೀಸಲಿಡಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಸಲು ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯರು ಸಹಕರಿಸಬೇಕು ಎಂದು ಚಂದ್ರಕಲಾ ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಮಾಳೆಯಂಡ ಪೆಮ್ಮಯ್ಯ, ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾಪಂ ಅಧ್ಯಕ್ಷೆ ರೋಸ್‌ಮೇರಿ ರಾಡ್ರಿಗಸ್, ಸದಸ್ಯರಾದ ರಜಾಕ್, ಕೆ.ಇ.ಕರೀಂ, ಎ.ಶ್ರೀಧರ್ ಕುಮಾರ್, ರತ್ನಾ ಜಯನ್, ನಾಗರತ್ನಾ ಸುರೇಶ್, ಗಿರಿಜಾ ಉದಯಕುಮಾರ್, ಶೋಭಾ ರವಿ, ಕಾಂಗ್ರೆಸ್ ಮುಖಂಡ ಎಂ.ಎ.ವಸಂತ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್.ರವಿ ಮತ್ತಿತರರು ಇದ್ದರು.