ಶಿರಸಿ: ಇಲ್ಲಿನ ಶ್ರೀ ರಾಜಸ್ಥಾನ ವಿಷ್ಣು ಸಮಾಜದವರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನವರಾತ್ರಿ ದಾಂಡಿಯಾ, ಸತ್ಸಂಗ ಹಾಗೂ ಭವ್ಯ ರಾತ್ರಿ ಜಾಗರಣದ ಆಚರಣೆಯ ಅಂಗವಾಗಿ ಇತ್ತೀಚೆಗೆ ದುರ್ಗಾ ದೇವಿಯ ಭಾವಚಿತ್ರದ ಪ್ರತಿಷ್ಠಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಹಸ್ತಿಮಲ್ ಚೌಧರಿ, ಜೋಗಾರಾಮ ಪಟೇಲ್, ವಲಾರಾಮ್ ಸುತಾರ, ಮೋಹನ್‌ಲಾ ಗೆಹ್ಲೋಟ್, ಕಾನಾರಾಮ್ ಪಟೇಲ್, ರಮೇಶ ಪಟೇಲ್, ಅಶುರಾಮ ದೇವಾಸಿ, ಅಭಯ ಸಿಂಗ್, ರಾಜಪೂತ್ ಸಹಿತ ಸಮಾಜದ ಸದಸ್ಯರು ಉಪಸ್ಥಿತರಿದ್ದರು.
ಕಳೆದ 2 ದಶಕಗಳಿಂದ ಪ್ರತಿವರ್ಷ ನವರಾತ್ರಿ ಆಚರಣೆ ಮಾಡುತ್ತಿರುವ ಶಿರಸಿಯ ಶ್ರೀ ರಾಜಸ್ಥಾನ ವಿಷ್ಣು ಸಮಾಜದವರು ಪ್ರತಿದಿನ ಭಜನೆ, ದಾಂಡಿಯಾ, ಸತ್ಸಂಗ, ಇನ್ನಿತರ ಕಾರ್ಯಕ್ರಮ ನಡೆಸುತ್ತಾರೆ. ಈ ವರ್ಷ ಅ.3 ರಿಂದ ಆರಂಭಗೊಂಡಿರುವ ಕಾರ್ಯಕ್ರಮ ಅ.11 ರವರೆಗೆ ನಡೆಯಲಿದ್ದು, ಪ್ರತಿದಿನ ರಾತ್ರಿ 8 ರಿಂದ 10 ಗಂಟೆಯವರೆಗೆ ದಾಂಡಿಯಾ ಏರ್ಪಡಿಸುತ್ತಾರೆ. ಮಧ್ಯಾಹ್ನ 4 ರಿಂದ 6 ಗಂಟೆಯವರೆಗೆ ಮಹಿಳೆಯರಿಂದ ಭಜನೆ, ಅ.11 ರಂದು ವಿಧ್ಯಾರ್ಥಿ ಪ್ರತಿಭಾ ಪುರಸ್ಕಾರ ಮತ್ತು ಬೆಳಗ್ಗೆ 9.15ರಿಂದ ಹೋಮ ಅಷ್ಟಮಿ ಹಾಗೂ ಅ.12 ರಂದು ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರೆಗೆ ರಾಜಸ್ಥಾನ ಪಾಲಿ ಜಿಲ್ಲೆಯ ಬಾಬಗಾವನ ಭಜನ್ ಗಾಯಕ ಮುಕೇಶ ಪ್ರಜಾಪಿತ ಮತ್ತು ತಂಡದವರಿಂದ ಭಜನ್ ಸಂಧ್ಯಾ ಆಯೋಜಿಸಲಾಗಿದೆ. ಅ.13 ರಂದು ರವಿವಾರ ಮಧ್ಯಾಹ್ನ 12 ರಿಂದ 2.30 ಗಂಟೆಯವರೆಗೆ ಮಹಾಪ್ರಸಾದ ವಿತರಣೆ ನಡೆಯಲಿದೆ.