ಮೈಸೂರು: ರಾಜ್ಯದ ಎಲ್ಲ ಜಿಲ್ಲೆಯಲ್ಲೂ ಮುಂದಿನ ಮೂರು ವರ್ಷದೊಳಗೆ ಸ್ವಯಂಚಾಲಿತ ವಿದ್ಯುನ್ಮಾನ ಚಾಲನಾ ಪರೀಕ್ಷಾ ಪಥ ನಿರ್ಮಾಣ ಮಾಡಲಾಗುವುದೆಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಸಾರಿಗೆ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ(ಮೈಸೂರು ಪೂರ್ವ) ವತಿಯಿಂದ ರಾಜೀವ್‌ನಗರದಲ್ಲಿರುವ ಕಚೇರಿ ಆವರಣದಲ್ಲಿ ‘ಸ್ವಯಂಚಾಲಿತ ವಿದ್ಯುನ್ಮಾನ ಚಾಲನಾ ಪರೀಕ್ಷಾ ಪಥ’ ಉದ್ಘಾಟಿಸಿ ಮಾತನಾಡಿದರು. ವಾಹನ ಚಾಲನೆಯಲ್ಲಿ ಪಕ್ವತೆ ಇಲ್ಲದೆ ಇರುವ ಹಿನ್ನೆಲೆಯಲ್ಲಿ ದೇಶದಲ್ಲಿ ಪ್ರತಿ ವರ್ಷ ಒಂದೂವರೆ ಲಕ್ಷ ಜನರು ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. ಅಪಘಾತ ತಡೆಗೆ ಚಾಲಕರಿಗೆ ಸೂಕ್ತ ತರಬೇತಿ ಹಾಗೂ ರಸ್ತೆ ಸಂಚಾರ ನಿಯಮಗಳ ಕುರಿತು ಅರಿವಿನ ಅವಶ್ಯಕತೆ ಇದೆ ಎಂದರು.
ದೇಶದಲ್ಲಿ ಅಪಘಾತ ಪ್ರಮಾಣ ತಗ್ಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ಅನುಸರಿಸುತ್ತಿದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ರಸ್ತೆ ಅಪಘಾತ ಪ್ರಮಾಣ ಹೆಚ್ಚಿದೆ. ಬೇರೆ ದೇಶದ ವಾಹನ ಚಾಲಕರಲ್ಲಿ ಇರುವಷ್ಟು ಪ್ರಜ್ಞೆ ನಮ್ಮ ಚಾಲಕರಲ್ಲಿ ಕಂಡು ಬರುತ್ತಿಲ್ಲ. ಹಲವು ಮುಂದುವರಿದ ರಾಷ್ಟ್ರಗಳಲ್ಲಿ ವಾಹನ ಚಾಲಕರು ಹಾರನ್ ಬಳಸುವುದಿಲ್ಲ. ಹೀಗಿದ್ದರೂ ಅಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿಲ್ಲ. ಅಲ್ಲಿನ ಚಾಲಕರು ಜೀವದ ಮೌಲ್ಯವನ್ನು ಅರಿತಿದ್ದಾರೆ. ಆ ಅರಿವು ನಮ್ಮಲ್ಲೂ ಬರಬೇಕೆಂದು ಹೇಳಿದರು.
ಮೈಸೂರು ಭಾಗದಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 450 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ಹೆಚ್ಚು ತೆರಿಗೆ ಸಂಗ್ರಹವಾಗುವ ಇಲಾಖೆಯಲ್ಲಿ ಸಾರಿಗೆ ಇಲಾಖೆ ಕೂಡ ಒಂದಾಗಿದೆ. ಪ್ರಸ್ತುತ ರಾಜ್ಯದಲ್ಲಿ ವಾಹನ ತೆರಿಗೆ ಹೆಚ್ಚು ಇದೆ. ಗೋವಾ, ಮಹಾರಾಷ್ಟ್ರ, ಪಾಂಡಿಚೇರಿಯಲ್ಲಿ ಕಡಿಮೆ ಇದೆ. ಹೀಗಾಗಿ ಸಾಕಷ್ಟು ವಾಹನ ಮಾಲೀಕರು ನೆರೆಯ ರಾಜ್ಯದಲ್ಲಿ ನೋಂದಣಿ ಮಾಡಿಸುತ್ತಿದ್ದಾರೆ. ಆದರೆ, ವಾಹನಗಳನ್ನು ನಮ್ಮ ರಾಜ್ಯದಲ್ಲಿ ಬಳಕೆ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಬರಬೇಕಾದ ಆದಾಯ ತಪ್ಪುತ್ತಿದೆ ಎಂದರು.
ಒನ್ ನೇಷನ್ ಒನ್ ಟ್ಯಾಕ್ಸ್ ಜಾರಿಯಾದರೆ ತೆರಿಗೆ ಸಂಗ್ರಹದಲ್ಲಿ ಕೊರತೆಯಾಗಲಿದೆ. ಸರ್ಕಾರದ ಬೊಕ್ಕಸಕ್ಕೆ ಸಾರಿಗೆ ಇಲಾಖೆಯಿಂದ ವಾರ್ಷಿಕ 7 ಸಾವಿರ ಕೋಟಿ ರೂ.ಗಿಂತ ಹೆಚ್ಚು ಆದಾಯ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಮೈಸೂರು ಸಾಕಷ್ಟು ಬೆಳವಣಿಗೆ ಹೊಂದುತ್ತಿದ್ದು, ಈ ಬೆಳವಣಿಗೆಗೆ ಪೂರಕವಾಗಿ ಸರ್ಕಾರ ನಗರಕ್ಕೆ ಅಗತ್ಯ ಮೂಲ ಸೌಲಭ್ಯಗಳನ್ನು ನಿರಂತರವಾಗಿ ಒದಗಿಸುತ್ತ ಬರುತ್ತಿದೆ. ನಗರದಲ್ಲಿ ‘ಸ್ವಯಂಚಾಲಿತ ವಿದ್ಯುನ್ಮಾನ ಚಾಲನಾ ಪರೀಕ್ಷಾ ಪಥ’ ನಿರ್ಮಾಣವಾಗಿರುವುದು ಸ್ವಾಗತಾರ್ಹ. ನಗರಕ್ಕೆ ಸುಸಜ್ಜಿತ ಬಸ್‌ಗಳ ಕೊರತೆ ಇದ್ದು, ಕೂಡಲೇ ಬಸ್ ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಿದರು.
ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎನ್.ಶಿವಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ 10 ಆರ್‌ಟಿಒ ಕಚೇರಿಗಳಿದ್ದು, ಈ ಪೈಕಿ 2 ಕಡೆ ಸ್ವಯಂ ಚಾಲಿತ ವಿದ್ಯುನ್ಮಾನ ಚಾಲನಾ ಪರೀಕ್ಷಾ ಪಥವನ್ನು ನಿರ್ಮಿಸಲಾಗಿದೆ. ಶಿವಮೊಗ್ಗ, ಹಾಸನ, ಮಂಗಳೂರು, ಕಲಬುರಗಿಯಲ್ಲಿ ಕಾಮಗಾರಿ ಆರಂಭಿಸಿದ್ದು, ಮುಕ್ತಾಯದ ಹಂತದಲ್ಲಿದೆ. ಅಪಘಾತದಲ್ಲಿ ರಾಜ್ಯ 4ನೇ ಸ್ಥಾನ ಪಡೆದುಕೊಂಡಿದ್ದು, ಚಾಲಕರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಪ್ರವರ್ತನ ದಕ್ಷಿಣ ವಲಯ ಅಪರ ಸಾರಿಗೆ ಆಯುಕ್ತ ಸಿ.ಪಿ.ನಾರಾಯಣಸ್ವಾಮಿ, ಶಾಸಕ ಎಲ್.ನಾಗೇಂದ್ರ, ಎಂಎಲ್‌ಸಿ ಸಂದೇಶ್ ನಾಗರಾಜ್, ಮೈಸೂರು ವಿಭಾಗದ ಜಂಟಿ ಸಾರಿಗೆ ಆಯುಕ್ತ ಡಾ.ಸಿ.ಟಿ.ಮೂರ್ತಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಕೆ.ಎಸ್.ಸೌಂದರ್ಯ, ಯೋಮಕೇಶಪ್ಪ ಇತರರು ಇದ್ದರು.