ಹೈಟೆಕ್ ದಾಸೋಹಕ್ಕೆ ಭವನಕ್ಕೆ ಚಾಲನೆ

ಬೇಲೂರು: ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಆಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ಚನ್ನಕೇಶವಸ್ವಾಮಿ ದೇಗುಲದ ದಾಸೋಹಕ್ಕೆ ಭವನಕ್ಕೆ ಶಾಸಕ ಕೆ.ಲಿಂಗೇಶ್ ಚಾಲನೆ ನೀಡಿದರು.

ಬಳಿಕ ಮಾತನಾಡಿ 2008 ರಿಂದ ಪ್ರತಿನಿತ್ಯ ದಾಸೋಹ ನಡೆಯುತ್ತಿದೆ. ದಾಸೋಹದಲ್ಲಿ ಹೆಚ್ಚು ಭಕ್ತರು ಕೂರಲು ಆಗುತ್ತಿರಲಿಲ್ಲ. ಇದೀಗ ಜೀರ್ಣೋದ್ಧಾರ ಮಾಡಿ ಹೆಚ್ಚು ಜನರು ಕೂರಲು ಅನುಕೂಲ ಕಲ್ಪಿಸಲಾಗಿದೆ. ಪ್ರವಾಸಿಗರು ವಾಸ್ತವ್ಯಕ್ಕೆ ಅನುಕೂಲವಾಗುವಂತೆ ಕಡಿಮೆ ಬಾಡಿಗೆ ವಸತಿಗೃಹ ನಿರ್ಮಾಣದ ಅಗತ್ಯವಿದೆ. ದಾಸೋಹದ ಮೇಲ್ಭಾಗದಲ್ಲಿ ಬಡವರು ವಿವಾಹ ಇನ್ನಿತರೆ ಕಾರ್ಯಗಳನ್ನು ಮಾಡಲು ಅನುಕೂಲವಾಗುವಂತೆ ಕಲ್ಯಾಣ ಮಂಟಪ ನಿರ್ಮಾಣ ಮಾಡಿದ್ದಾರೆ. ಇದರ ಇನ್ನಿತರೆ ಸೌಕರ್ಯಕ್ಕೆ ಶಾಸಕರ, ಸಂಸದರ ನಿಧಿಯಿಂದ 5 ಲಕ್ಷ ರೂ. ನೀಡಲಾಗುವುದು ಎಂದರು.

ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೈ.ಟಿ.ದಾಮೋಧರ್ ಮಾತನಾಡಿ, ಚನ್ನಕೇಶವಸ್ವಾಮಿ ದೇಗುಲಕ್ಕೆ ಆಗಮಿಸುವ ಪ್ರವಾಸಿಗರ ಹಿತದೃಷ್ಟಿಯಿಂದ ಶಿಥಿಲಗೊಂಡ ದಾಸೋಹದ ಕೊಠಡಿಯ ಛಾವಣಿ, ಕುಡಿಯುವ ನೀರು, ನೆಲಹಾಸು, ಹೆಚ್ಚುವರಿಯಾಗಿ ದಾಸೋಹಕ್ಕೆ ಕುಳಿತುಕೊಳ್ಳಲು ಸಭಾಂಗಣವನ್ನು 80 ಲಕ್ಷ ರೂ. ಅನುದಾನದಲ್ಲಿ ಮಾಡಿಸಲಾಗಿದೆ. ವಿಶಾಲವಾದ ಊಟದ ಕೊಠಡಿಗಳು, ಸಭಾಂಗಣ, ದಾಸ್ತಾನು ಕೋಣೆ, ಅಡುಗೆ ತಯಾರಿಕೆಗೆ ಅಗತ್ಯವಿರುವ ಹೊಗೆ ಮುಕ್ತ ಗ್ಯಾಸ್ ಸಂಪರ್ಕ ಕೊಡಿಸಲಾಗಿದೆ. ಭಕ್ತರ ಪ್ರವೇಶ ದ್ವಾರಗಳು, ಶುದ್ಧ ಕುಡಿಯುವ ನೀರು ಸೇರಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ದೇಗುಲದ ಅರ್ಚಕರಾದ ಕೃಷ್ಣಸ್ವಾಮಿಭಟ್ಟರ್, ಶ್ರೀನಿವಾಸ್‌ಭಟ್ ನೇತೃತ್ವದಲ್ಲಿ ಹೋಮ, ಹವನಗಳನ್ನು ನಡೆಯಿತು. ದೇಗುಲದ ಮಾಜಿ ಸಂಚಾಲಕ ತೊ.ಚ.ಅನಂತಸುಬ್ಬರಾಯ, ಇಒ ವಿದ್ಯುನ್‌ಲ್ಲತಾ, ತಾಪಂ. ಉಪಾಧ್ಯಕ್ಷೆ ಕಮಲಾಚಿಕ್ಕಣ್ಣ, ಪುರಸಭ ಸದಸ್ಯ ಶ್ರೀನಿಧಿ, ವ್ಯವಸ್ಥಾಪನಾ ಸಮಿತಿಯ ವೆಂಕಟೇಗೌಡ, ಬಿ.ಎಂ.ರವೀಶ್, ಜಗದೀಶ್, ರತ್ನಸತ್ಯನಾರಾಯಣ, ಕೇಶವಮೂರ್ತಿ, ಮಾಜಿ ಧರ್ಮದರ್ಶಿ, ಬಾಸ್ಕರ್, ವಿಜಯಲಕ್ಷ್ಮೀ ಇನ್ನಿತರರಿದ್ದರು.