ಬಿತ್ತನೆ ಆಲೂ ವಿತರಣೆಗೆ ಚಾಲನೆ

ಹಾಸನ: ಬಿತ್ತನೆ ಆಲೂಗಡ್ಡೆ ವಿತರಣೆಗೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಗುರುವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.

ಎಪಿಎಂಸಿಯ ಪ್ರತಿ ಮಳಿಗೆಗೆ ಹೂವಿನ ಹಾರ ಹಾಗೂ ಮಾವಿನ ತೋರಣ ಕಟ್ಟಿ ಸಿಂಗರಿಸಲಾಗಿತ್ತು. ವ್ಯಾಪಾರಿಗಳು ಪೂಜೆ ಸಲ್ಲಿಸಿ ಮಾರಾಟ ಪ್ರಾರಂಭಿಸಿದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ರಾಥೋರ್ ಸಿಂಗ್, ತಹಸೀಲ್ದಾರ್ ಶ್ರೀನಿವಾಸಯ್ಯ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್, ಎಪಿಎಂಸಿ ಅಧ್ಯಕ್ಷ ಮಂಜೇಗೌಡ, ವರ್ತಕರ ಸಂಘದ ಅಧ್ಯಕ್ಷ ಎಚ್.ಡಿ. ಗೋಪಾಲ್ ಇತರರು ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

20 ಸಾವಿರ ಮೆಟ್ರಿಕ್ ಟನ್ ದಾಸ್ತಾನು:
ಗುಣಮಟ್ಟದ ಬಿತ್ತನೆ ಆಲೂಗಡ್ಡೆ ವಿತರಣೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು, ನಗರದ 8 ಶೀತಲಗೃಹಗಳಲ್ಲಿ 20 ಸಾವಿರ ಮೆಟ್ರಿಕ್ ಟನ್ ಬಿತ್ತನೆ ಆಲೂ ದಾಸ್ತಾನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಸರ್ಕಾರ ರೈತರಿಗೆ ಶೇ.50 ರಷ್ಟು ಪ್ರೋತ್ಸಾಹಧನ ಘೋಷಿಸಿದೆ. ಜತೆಗೆ, ಔಷಧ ಹಾಗೂ ರಸಗೊಬ್ಬರವನ್ನು ಸ್ಥಳದಲ್ಲಿಯೇ ನೀಡಲಾಗುವುದು. ಜಿಲ್ಲೆಯ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆಯಾಗುವ ನಿರೀಕ್ಷೆಯಿದ್ದು, ಉತ್ತಮ ಮಳೆಯಾದರೆ ರೈತರಿಗೆ ಒಳ್ಳೆಯದಾಗಲಿದೆ ಎಂದರು.

ಆಲೂಗಡ್ಡೆ ಮಾರಾಟದಲ್ಲಿ ಅಕ್ರಮ ಎಸಗದಂತೆ ಕ್ರಮ ಕೈಗೊಳ್ಳಲಾಗಿದೆ. ವರ್ತಕರು ಮೋಸ ಮಾಡುವ ಪ್ರಕರಣ ಕಂಡುಬಂದರೆ ತಕ್ಷಣವೇ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

1,500 ರೂ. ಬೆಲೆ ನಿಗದಿ:
ಈ ಬಾರಿ ದೃಢೀಕೃತ ಆಲೂಗಡ್ಡೆ ಆಮದು ಮಾಡಿಕೊಳ್ಳದ ಕಾರಣ ಎಲ್ಲ ತಳಿಯ ಆಲೂಗಡ್ಡೆಯನ್ನು ಸಮಾನವಾಗಿ ಪರಿಗಣಿಸಿದ್ದು, ಕ್ವಿಂಟಾಲ್‌ಗೆ 1,500 ರೂ. ದರ ನಿಗದಿಪಡಿಸಲಾಗಿದೆ. ತೋಟಗಾರಿಕೆ ಇಲಾಖೆ ವತಿಯಿಂದ ಆಲೂಗಡ್ಡೆ ಖರೀದಿಸಿದ ರೈತರಿಗೆ ರಸಗೊಬ್ಬರ ಹಾಗೂ ಕ್ರಿಮಿನಾಶಕವನ್ನು ಶೇ.50ರ ಪ್ರೋತ್ಸಾಹಧನದಲ್ಲಿ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಪ್ರತಿ ಎಕರೆಗೆ 3200 ಗ್ರಾಂ ಮ್ಯಾಂಕೋಜೆಟ್ ಬೀಜೋಪಚಾರ ಔಷಧ, ಎರಡು ಕೆ.ಜಿ. ಮ್ಯಾಕ್ಸಮೆಟ್ ಔಷಧ (ಅಂಗಮಾರಿ ರೋಗ ತಡೆಗೆ) ಹಾಗೂ 800 ಗ್ರಾಂ ಪ್ರೋಪರ್‌ಗೇಟ್ ಕ್ರಿಮಿನಾಶಕ ವಿತರಿಸಲಾಗುತ್ತಿದೆ. ಈ ಎಲ್ಲ ಔಷಧಗಳ ಬೆಲೆ 900 ರೂ. ಆಗಲಿದ್ದು, ರೈತರು 450 ರೂ. ಪಾವತಿಸಬೇಕು. ಕ್ವಿಂಟಾಲ್ ಆಲೂಗಡ್ಡೆಗೆ 1500 ರೂ. ಗೊತ್ತುಪಡಿಸಿದ್ದು, ಶೇ.50 ರಷ್ಟು ಪ್ರೋತ್ಸಾಹಧನ ದೊರೆಯಲಿದೆ. ತೋಟಗಾರಿಕೆ ಇಲಾಖೆಯೇ ‘ಫ್ರೂಟ್ಸ್’ ಎಂಬ ಆ್ಯಪ್ ಅನುಷ್ಠಾನಗೊಳಿಸಿದ್ದು, ಆಲೂಗಡ್ಡೆ ಖರೀದಿಸಿರುವ ಎಲ್ಲ ರೈತರ ವಿವರ ಅದರಲ್ಲಿ ಅಡಕವಾಗಿರುತ್ತದೆ. ನಂತರ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರೋತ್ಸಾಹಧನ ಮಂಜೂರು ಮಾಡುತ್ತಾರೆ.

ಎಪಿಎಂಸಿ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ 11 ರೈತ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಆಲೂಗಡ್ಡೆ ಖರೀದಿ ರಸೀದಿಯನ್ನು ಕೇಂದ್ರದ ಅಧಿಕಾರಿಗಳಿಗೆ ನೀಡಿ ಹೆಸರು ನೋಂದಾಯಿಸಬೇಕು.

ಮಳೆ ಕೊರತೆ ಭೀತಿ:
ಆಲೂಗಡ್ಡೆ ಬಿತ್ತನೆಗೆ ರೈತರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರೂ ಮಳೆ ಕೊರತೆಯಿಂದ ಬಿತ್ತನೆ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮೇ ಮೊದಲ ವಾರದಲ್ಲೇ ಆಲೂಗಡ್ಡೆ ಬಿತ್ತನೆಯಾಗಬೇಕಿತ್ತು. ಆದರೆ ಇದುವರೆಗೆ ಕೇವಲ 2 ಮಳೆಯಾಗಿದ್ದು, ಭೂಮಿ ಹದವಾಗಿಲ್ಲ. ಆಲೂಗಡ್ಡೆ ಖರೀದಿಸಿರುವ ರೈತರು ಮಳೆಯಾಗುವವರೆಗೆ ಬಿತ್ತನೆ ಬೀಜವನ್ನು ಮನೆಯಲ್ಲೇ ದಾಸ್ತಾನು ಮಾಡಬೇಕಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ಎಚ್.ಡಿ. ಗೋಪಾಲ್ ಹೇಳಿದರು.

ಸಸ್ಯ ಸಂತೆಗೆ ಚಾಲನೆ:
ಜಿಲ್ಲೆಯ ರೈತರ ಅನುಕೂಲಕ್ಕಾಗಿ ಮೇ 16ರಿಂದ 18ರವರೆಗೆ ಎಪಿಎಂಸಿ ಪ್ರಾಂಗಣದಲ್ಲಿ ‘ಸಸ್ಯ ಸಂತೆ’ ಆಯೋಜಿಸಲಾಗಿದ್ದು, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಚಾಲನೆ ನೀಡಿದರು. ಪಪ್ಪಾಯ, ಅಡಕೆ, ಕಾಳುಮೆಣಸು, ನೇರಳೆ ಸಸಿಗಳನ್ನು ಸಸ್ಯ ಸಂತೆಯಲ್ಲಿ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ.

ಆಲೂಗಡ್ಡೆ ಬೆಳೆ ಅತ್ಯಂತ ಲಾಭದಾಯಕವಾಗಿದ್ದು, ಉತ್ತಮ ಮಳೆಯಾದರೆ ಕಡಿಮೆ ಖರ್ಚಿನಲ್ಲೇ ಅಧಿಕ ಇಳುವರಿ ಪಡೆಯಬಹುದು. ಎಪಿಎಂಸಿ ಆವರಣದಲ್ಲಿ ಆಲೂಗಡ್ಡೆ ವಿತರಣೆಗೆ ಉತ್ತಮ ವ್ಯವಸ್ಥೆ ಮಾಡಿದ್ದಾರೆ.
ಮಂಜಯ್ಯ, ಕಬ್ಬಳಿ ರೈತ

Leave a Reply

Your email address will not be published. Required fields are marked *