ಲಕ್ಷ್ಮೇಶ್ವರ: ಪಟ್ಟಣದಲ್ಲಿ ದಸರಾ ಹಬ್ಬದ ನಿಮಿತ್ತ ದುರ್ಗಾದೌಡ ಧಾರ್ಮಿಕ ನಡಿಗೆ ಕಾರ್ಯಕ್ರಮಕ್ಕೆ ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಟ್ಟಣದ ಶ್ರೀ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯರು ಗುರುವಾರ ಚಾಲನೆ ನೀಡಿದರು.
ಭಗವಾ ಧ್ವಜ ಮತ್ತು ದೇವಿಯ ಆಯುಧ ತ್ರಿಶೂಲಕ್ಕೆ ಪೂಜೆ ಸಲ್ಲಿಸಿ, ವಿವಿಧ ದೇವತೆಗಳ ಘೋಷಣೆ ಮೊಳಗಿಸುವ ಮೊದಲ ದಿನದ ಧಾರ್ಮಿಕ ನಡಿಗೆಯು ಬೆಳಗ್ಗೆ 5.30ಕ್ಕೆ ದ್ಯಾಮವ್ವದೇವಿ ದೇವಸ್ಥಾನದಿಂದ ಪ್ರಾರಂಭವಾಯಿತು.
ಕಾರ್ಯಕ್ರಮದ ರೂವಾರಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಗುರುನಾಥ ದಾನಪ್ಪನವರ ಮಾತನಾಡಿ, ಯುವಕರಲ್ಲಿ ಧಾರ್ಮಿಕ ಮೌಲ್ಯ ಹೆಚ್ಚಿಸುವ ಧರ್ಮ ಜಾಗೃತಿ, ಧಾರ್ಮಿಕ ಕಲ್ಪನೆಗಳು ಉಳಿಯಬೇಕು ಎನ್ನುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಧಾರ್ಮಿಕ ನೆಲೆಗಟ್ಟಿನ ಮೇಲೆ ಹಬ್ಬದ ಆಚರಣೆ ವೈಭವದಿಂದ ಆಚರಿಸುವ ಉದ್ದೇಶವಾಗಿದ್ದು, ಇದರಲ್ಲಿ ಎಲ್ಲರೂ ಸಮಾನತೆಯಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ದೇವಪ್ಪ ಗಡೇದ, ಬಸವರಾಜ ಅರಳಿ ಮಾತನಾಡಿದರು. ಸಮಿತಿ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ, ಮಹೇಶ ಲಿಂಬಯ್ಯಸ್ವಾಮಿಮಠ, ತಿಪ್ಪಣ್ಣ ಸಂಶಿ, ನೀಲಪ್ಪ ಕರ್ಜೆಕಣ್ಣವರ, ಜ್ಞಾನೋಬಾ ಬೋಮಲೆ, ಯಲ್ಲಪ್ಪ ಕೋರದಾಳ, ರಾಜಶೇಖರ ಶಿಗ್ಲಿಮಠ, ರವಿ ಲಿಂಗಶೆಟ್ಟಿ, ರಾಜೇಶ್ವರಿ ದಾನಪ್ಪನವರ, ಸುಜಾತಾ ಅತ್ತಿಗೇರಿ, ಪುಷ್ಟಾ ಪಾಟೀಲ, ರೇಣುಕಾ ಮಾಗಡಿ, ಶಿವನಗೌಡ ಪಾಟೀಲ, ಗಂಗಾಧರ ಮೆಣಸಿನಕಾಯಿ, ಎಸ್.ಎಂ.ಶಿರುಂದ, ವೆಂಕಟೇಶ ಪಾಟೀಲ, ಬಾಬಣ್ಣ ಅಳವಂಡಿ, ಹಾಜರಿದ್ದರು.
ಶುಕ್ರವಾರ ಸಣ್ಣ ದ್ಯಾಮವ್ವ ದೇವಸ್ಥಾನದಿಂದ ಶ್ರೀ ಬನಶಂಕರಿ ದೇವಸ್ಥಾನದವರೆಗೆ ದುರ್ಗಾದೌಡ ಧಾರ್ಮಿಕ ನಡಿಗೆ ಮುಂದುವರೆಯಲಿದೆ ಎಂದು ಕಾರ್ಯದರ್ಶಿ ಮಲ್ಲನಗೌಡ ಪಾಟೀಲ ತಿಳಿಸಿದ್ದಾರೆ.