ಮನೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ

ಮಡಿಕೇರಿ: ಕೊಡಗಿನ ಪ್ರಕೃತ್ತಿ ವಿಕೋಪ ಸಂತ್ರಸ್ಥರಿಗೆ ಸರ್ಕಾರಕ್ಕಿಂತ ಮೊದಲು ಲಯನ್ಸ್ ಸೇರಿದಂತೆ ಸರ್ಕಾರೇತರ ಸಂಸ್ಥೆಗಳು ನೆರವಿನ ಹಸ್ತ ಚಾಚಿದ್ದು, ಈಗಾಗಲೇ ಲಯನ್ಸ್ ಕ್ಲಬ್ ಮೂಲಕ 4 ಮನೆಗಳನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಲಯನ್ಸ್ ಜಿಲ್ಲಾ ಗರ್ವನರ್ ಕೆ.ದೇವದಾಸ್ ಭಂಡಾರಿ ಹೇಳಿದ್ದಾರೆ.

ಮಡಿಕೇರಿ ಹೊರವಲಯದ ಆಹನ್ ಕಾಟೇಜ್‌ನಲ್ಲಿ ಲಯನ್ಸ್ ಜಿಲ್ಲಾ ಗರ್ವನರ್ ಅಧಿಕೃತ ಭೇಟಿ ಸಂದರ್ಭ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯಾಧಿಕಾರಿ ಡಾ.ಮನೋಹರ್ ಜಿ.ಪಾಟ್ಕರ್ ಅವರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಅವರು, ಪ್ರಕೃತ್ತಿ ವಿಕೋಪಕ್ಕೀಡಾದ ಸಂದರ್ಭ ಲಯನ್ಸ್ ಸದಸ್ಯರು ಕೂಡಲೇ ಕಾರ್ಯಪ್ರವೃತ್ತರಾಗಿ ಸಂತ್ರಸ್ಥರಿಗೆ ಅಗತ್ಯ ನೆರವು ನೀಡಿದ್ದಾರೆ ಎಂದರು.
ಅಂತೆಯೇ, ಮನೆ ಕಳೆದುಕೊಂಡವರಿಗೆ ಈಗಾಗಲೇ ಕುಂಬಾರಗಡಿಗೆ, ದುದ್‌ಗಲ್ ಸಮೀಪ ನಾಲ್ಕು ಮನೆ ನಿರ್ಮಾಣಕಾರ್ಯ ಪ್ರಾರಂಭವಾಗಿದೆ. ಸರ್ಕಾರದ ನೆರವಿಗೆ ಕಾಯದೇ ಸಂತ್ರಸ್ಥರ ಸಹಾಯಕ್ಕಾಗಿ ಲಯನ್ಸ್ ನಂತಹ ಸರ್ಕಾರೇತರ ಸಂಸ್ಥೆಗಳು ಧಾವಿಸಿ ಸಹಾಯ ಹಸ್ತ ನೀಡಿ ಮಾನವೀಯತೆಯೊಂದಿಗೆ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಸನ್ಮಾನ ಸ್ವೀಕರಿಸಿ ಹಿರಿಯ ವೈದ್ಯ ಡಾ.ಮನೋಹರ್ ಮಾತನಾಡಿದರು. ಮಡಿಕೇರಿ ಲಯನ್ಸ್ ಕ್ಲಬ್‌ನ 17 ಮಾಜಿ ಅಧ್ಯಕ್ಷರನ್ನು ಗೌರವಿಸಲಾಯಿತು. ಮಡಿಕೇರಿ ಲಯನ್ಸ್ ಕ್ಲಬ್‌ಗೆ ನೂತನ ಸದಸ್ಯೆಯಾಗಿ ಜಿ.ವನಜಾಕ್ಷಿ ದಾಮೋದರ್ ಅವರನ್ನು ಸೇರ್ಪಡೆಗೊಳಿಸಲಾಯಿತು. ಮಾದಾಪುರ ಬಳಿಯ ಬಿಳಿಗೇರಿ ಗ್ರಾಮದಲ್ಲಿನ 8 ಕುಟುಂಬಗಳಿಗೆ ನೆರವಾಗಬಲ್ಲ 5 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್‌ನ್ನು ಕೊಡುಗೆಯಾಗಿ ನೀಡಲಾಯಿತು.

ಮಡಿಕೇರಿ ಲಯನ್ಸ್ ಅಧ್ಯಕ್ಷ ಕೆ.ಕೆ.ದಾಮೋದರ್, ಸುಖಲತಾ ಭಂಡಾರಿ, ಕಾರ್ಯದರ್ಶಿ ಪಿ.ಪಿ.ಸೋಮಣ್ಣ, ಖಜಾಂಜಿ ಬಿ.ಸಿ.ನಂಜಪ್ಪ, ಪ್ರಾಂತೀಯ ಅಧ್ಯಕ್ಷ ಬೋಸ್ ಪೆಮ್ಮಯ್ಯ, ವಲಯಾಧ್ಯಕ್ಷರಾದ ಡಾ.ಸೂರಜ್ ಉತ್ತಪ್ಪ, ಮಹೇಶ್, ಕೋಠಿ, ಮಾಜಿ ಅಧ್ಯಕ್ಷ ಕೆ.ಎ.ಬೊಳ್ಳಪ್ಪ, ಮಡಿಕೇರಿ ಲಯನ್ಸ್‌ನ ಎಂ.ಎ.ನಿರಂಜನ್, ಕಿಶೋರ್, ಕೆ.ಮಧುಕರ್, ಸ್ನೇಹಾ ಮತ್ತು ಸ್ವಪ್ನಾ, ರೋಟರಿ ಜಿಲ್ಲಾ ಮಾಜಿ ಗರ್ವನರ್ ಡಾ.ರವಿ ಅಪ್ಪಾಜಿ, ಮಾತಂಡ ಸುರೇಶ್ ಚಂಗಪ್ಪ, ಮಡಿಕೇರಿ ರೋಟರಿ ಅಧ್ಯಕ್ಷ ಓ.ಎಸ್.ಚಿಂಗಪ್ಪ ಮತ್ತಿತರರು ಹಾಜರಿದ್ದರು.