ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಕೊಳ್ಳೇಗಾಲ: ಪಟ್ಟಣದ ಚಿಕ್ಕರಂಗನಾಥ ಕೆರೆಯಿಂದ ಕೊಂಗಲಕೆರೆವರೆಗೆ ಹಾದು ಹೋಗಿರುವ 1ಕಿಮೀ ಉದ್ದದ ಸರ್ ಕಾರ್ಟನ್ ನೀರಾವರಿ ಕಾಲುವೆ ಅಭಿವೃದ್ಧಿ ಕಾಮಗಾರಿ ಮೂರು ದಿನಗಳಿಂದ ಆರಂಭಗೊಂಡಿದೆ.

ಚಿಕ್ಕರಂಗನಾಥ ಕೆರೆಯಿಂದ ಕೋಡಿ ಬಿದ್ದ ನೀರು ಸರಾಗವಾಗಿ ಹರಿದು ಸಾಗಿ ಪಟ್ಟಣದೊಳಗಿನ ಕೊಂಗಲಕೆರೆ ಸೇರಲು ಸರ್ ಕಾಟನ್ ಕಾಲುವೆ ಬ್ರಿಟಿಷರ ಕಾಲದಿಂದಲೂ ಸಹಕಾರಿಯಾಗಿದೆ. ಕಾಲುವೆ ಅಭಿವೃದ್ಧಿಗೆ 2017ರ ಡಿಸೆಂಬರ್ 10ರಂದು ಅಂದಿನ ಸಿಎಂ ಸಿದ್ದರಾಮಯ್ಯ, ಸ್ಥಳಿಯ ಶಾಸಕ ಎಸ್.ಜಯಣ್ಣ ಅವರ ಸಮ್ಮುಖದಲ್ಲಿ 6.87 ಕೋಟಿ ರೂ. ಅನುದಾನ ನೀಡಿ ಭೂಮಿಪೂಜೆ ನೆರವೇರಿಸಲಾಗಿತ್ತು.

ಆ ಬಳಿಕ 10 ತಿಂಗಳು ಕಳೆದರೂ ಕಾಮಗಾರಿ ಆರಂಭಗೊಂಡಿರಲಿಲ್ಲ. ಬಳಿಕ ಹಂತ, ಹಂತವಾಗಿ ‘ವಿಜಯವಾಣಿ’ ಜನಾಭಿಪ್ರಾಯದ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಇದರಿಂದ ಜಾಗೃತಗೊಂಡ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಂಬಂಧಿಸಿದ ಗುತ್ತಿಗೆದಾರರನ್ನು ಕರೆತಂದು ಸೋಮವಾರದಿಂದ ಕಾಲುವೆ ಅಭಿವೃದ್ಧಿ ಕೆಲಸಕ್ಕೆ ಮುಂದಾಗಿದ್ದಾರೆ.

ಕಾಲುವೆಯಲ್ಲಿ ಕೊಳೆತು ನಾರುತ್ತಿರುವ ಹೂಳನ್ನು ಚಿಕ್ಕರಂಗನಾಥಕೆರೆ ಕೋಡಿ ಬೀಳುವ ಸ್ಥಳದಿಂದ ಹೊರ ತೆಗೆಸುವ ಕೆಲಸವನ್ನು ಆರಂಭಿಸಲಾಗಿದ್ದು, ಗುರುವಾರ ಇಲಾಖೆಯ ಸಹಾಯಕ ಇಂಜಿನಿಯರ್ ಆರ್.ರಾಮಕೃಷ್ಣ ಕಾಮಗಾರಿ ಪರಿಶೀಲಿಸಿದರು. ಅಲ್ಲದೇ 1ದಿನವೂ ಬಿಡುವು ನೀಡದೇ ಹೂಳು ತೆಗೆಯುವ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಕಾಲುವೆಗೆ ಹೊಂದಿಕೊಂಡಂತೆ ಬೆಳೆದಿದ್ದ ಕೆಲವು ಮರಗಳನ್ನು ಅರಣ್ಯ ಇಲಾಖೆ ಮೂಲಕ ಕಟಾವು ಮಾಡಿಸಬೇಕಿದ್ದ ಹಿನ್ನೆಲೆ ಕಾಮಗಾರಿ ತಡವಾಗಿತ್ತು. ಇದೀಗ ಕಾಲುವೆ ತಳದಲ್ಲಿ ಗಟ್ಟಿ ಮಣ್ಣು ಸಿಗುವವರೆಗೆ ಸಡಿಲಾದ ಮಣ್ಣು ಮತ್ತು ಹೂಳನ್ನು ತೆಗೆಸುವ ಕೆಲಸವನ್ನು ಯಂತ್ರಗಳ ಮೂಲಕ ಆರಂಭಿಸಲಾಗಿದೆ ಎಂದರು.

ಕಾಲುವೆ ಪಕ್ಕದಲ್ಲಿ ಹಲವು ವರ್ಷದಿಂದ ವಾಸಿಸುತ್ತಿರುವ ಸುಮಾರು 30 ಬಡವರ ಮನೆಗಳಿಗೆ ತೊಂದರೆಯಾಗದಂತೆ ಕೆಲಸ ನಡೆಸಲಾಗುವುದು. ಈಗಾಗಲೇ ಇಲ್ಲಿ ವಾಸಿಸುವರ ಪೈಕಿ 22 ಜನರಿಗೆ ಮನೆ ನಿರ್ಮಿಸಿಕೊಳ್ಳಲು ಬೇರೆಡೆ ಸರ್ಕಾರದಿಂದ ಉಚಿತ ನಿವೇಶನ ನೀಡಲಾಗಿದೆ. ಉಳಿದ 8ಜನರಿಗೆ ನಿವೇಶನ ನೀಡಲು ಸ್ಥಳಿಯ ನಗರಸಭೆ ಕ್ರಮವಹಿಸಿದೆ. 23 ಅಡಿ ಅಳತೆಯಲ್ಲಿ ಬಾಕ್ಸ್ ಕಾಂಕ್ರಿಟ್ ಕಾಲುವೆ ನಿರ್ಮಿಸಲಾಗುವುದು. ಉಳಿದ 10 ಅಡಿ ಸ್ಥಳವನ್ನು ಸರ್ವೀಸ್ ರಸ್ತೆಯಾಗಿ ಪರಿವರ್ತಿಸಿ, ಒಟ್ಟು 33 ಅಡಿ ಅಳತೆಯಲ್ಲಿ 1 ಕಿಮೀ ಉದ್ದಕ್ಕೆ ಸುಸಜ್ಜಿತ ಕಾಲುವೆ ನಿರ್ಮಿಸಲಾಗುವುದು ಎಂದರು.

Leave a Reply

Your email address will not be published. Required fields are marked *