‘ಮಡಿಕೇರಿ ಸ್ಕ್ವೇರ್’ ನಿರ್ಮಾಣಕ್ಕೆ ಚಾಲನೆ

ಮಡಿಕೇರಿ: ನಗರದ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಆಕರ್ಷಣೀಯ ‘ಮಡಿಕೇರಿ ಸ್ಕ್ವೇರ್’ ನಿರ್ಮಾಣದ ಮೊದಲ ಹಂತದ ತಡೆಗೋಡೆ ನಿರ್ಮಾಣಕ್ಕೆ ಪೂರಕವಾದ ಮಣ್ಣು ಪರೀಕ್ಷಾ ಕೆಲಸವನ್ನು ಆರಂಭಿಸಲಾಗಿದ್ದು, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಚಾಲನೆ ನೀಡಿದರು.

ಮಣ್ಣು ಕುಸಿದ ಜಾಗದ ಮೇಲ್ಭಾಗದಿಂದ ಎರಡು ಜಾಗಗಳನ್ನು ಗುರುತಿಸಿ ಸುಮಾರು ನೂರು ಅಡಿ ಆಳದವರೆಗೆ ಮಣ್ಣು ಕೊರೆದು, ಬೆಂಗಳೂರಿನ ಪ್ರತಿಷ್ಠಿತ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿಗೆ ಕಳುಹಿಸಲಾಗಿದೆ. ಪಿಎಚ್.ಡಿ ಪದವಿ ಪಡೆದಿರುವ ಡಾ.ನಾಗರಾಜ್ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಮಣ್ಣು ಪರೀಕ್ಷೆ ವರದಿ ಬಂದ ಕೂಡಲೇ ಪ್ರಥಮ ಹಂತದಲ್ಲಿ ನೂತನ ತಂತ್ರಜ್ಞಾನ ಬಳಸಿ ತಡೆಗೋಡೆ ನಿರ್ಮಿಸಲು ಭೂಮಿಪೂಜೆ ನೆರವೇರಿಸಲಿರುವುದಾಗಿ ಕಾವೇರಮ್ಮ ಸೋಮಣ್ಣ ತಿಳಿಸಿದರು.

ನಗರಸಭಾ ಸದಸ್ಯ ಎಚ್.ಎಂ.ನಂದಕುಮಾರ್ ಮಾತನಾಡಿ, ಎರಡನೇ ಹಂತದಲ್ಲಿ ತಡೆಗೋಡೆಯನ್ನು ಬಳಸಿ ’ಮಡಿಕೇರಿ ಸ್ಕ್ವೇರ್’ ಎಂಬ ವಿನೂತನ ಶೈಲಿಯ ಆಕರ್ಷಣಾ ಕೇಂದ್ರವನ್ನಾಗಿ ಮಾರ್ಪಡಿಸಲಿದೆ. ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆಂದು ತಿಳಿಸಿದರು.

ಈ ಸಂದರ್ಭ ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ, ಯೋಜನೆಯ ತಾಂತ್ರಿಕ ಸಲಹೆಗಾರ ನಿವೃತ್ತ ಕಾರ್ಯಪಾಲಕ ಅಭಿಯಂತರ ಸತ್ಯನಾರಾಯಣರಾವ್, ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್, ಗ್ರೀನ್‌ಸಿಟಿ ಫೋರಂನ ಚೆಯ್ಯಂಡ ಸತ್ಯ, ನಗರಸಭಾ ಆಯುಕ್ತ ರಮೇಶ್, ಡಾ.ನಾಗರಾಜ್ ಪಾಲ್ಗೊಂಡಿದ್ದರು.