ಗ್ರೀಷ್ಮ ರಂಗೋತ್ಸವಕ್ಕೆ ಚಾಲನೆ

ಮೈಸೂರು: ಎಸ್.ಮಾಲತಿ ಅವರ ಸ್ಮರಣಾರ್ಥ ರಂಗಾಯಣದ ವತಿಯಿಂದ ಆಯೋಜಿಸಿದ್ದ ‘ಗ್ರೀಷ್ಮ ರಂಗೋತ್ಸವ’ಕ್ಕೆ ಭಾನುವಾರ ಸಂಜೆ ಚಾಲನೆ ನೀಡಲಾಯಿತು.

ರಂಗಾಯಣದ ಭೂಮಿಗೀತ ವೇದಿಕೆಯಲ್ಲಿ ಪ್ರತಿ ಭಾನುವಾರ ನಾಟಕಗಳು ಪ್ರದರ್ಶನವಾಗಲಿದ್ದು, ಜೂ.23ಕ್ಕೆ ತೆರೆ ಬೀಳಲಿದೆ.

ಹಿರಿಯ ರಂಗ ನಿರ್ದೇಶಕ ಪ್ರೊ.ಎಚ್.ಎಸ್.ಉಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ತ್ರೀಯರ ನೋವುಗಳಿಗೆ, ಹೋರಾಟಕ್ಕೆ ತಮ್ಮ ನಾಟಕದ ಮೂಲಕ ಎಲ್.ಮಾಲತಿ ದನಿಯಾಗಿದ್ದರು. ವೈಯಕ್ತಿಕ ಅನುಭವದಿಂದಲೇ ನಾಟಕ ರಚಿಸಿದ್ದರು. ಇಂದಿನ ರಂಗಭೂಮಿಯಲ್ಲಿ ಮಹಿಳೆಯರು ಅನುಭವಿಸುವ ಎಲ್ಲ ಸಂಕಟಗಳನ್ನು ನಾಟಕದ ಮೂಲಕ ಅಭಿವ್ಯಕ್ತಿಗೊಳಿಸಿದ್ದರು ಎಂದು ಸ್ಮರಿಸಿದರು.

ಮೈಸೂರಿನ ರಂಗಭೂಮಿಗೂ ಮತ್ತು ಮಾಲತಿ ಅವರಿಗೂ ಅವಿನಾಭಾವ ಸಂಬಂಧವಿದೆ. ಅವರು ಎಂ.ಎ. ಓದುವಾಗ ನಾಟಕ ರಂಗವನ್ನು ಪ್ರವೇಶಿಸಿದ್ದರು. ನಟಿಯಾಗಿ ಬಂದು ನಿರ್ದೇಶಕಿಯಾಗಿ ಹೆಸರು ಮಾಡಿದ್ದರು. ಅವರ ಕಾಲಘಟ್ಟದಲ್ಲಿ ಸ್ತ್ರೀಪರ ಮತ್ತು ಮಹಿಳಾ ರಂಗಕರ್ಮಿಗಳು ಮಾಡಿದ ನಾಟಕಗಳನ್ನು ನೋಡುತ್ತಿರಲಿಲ್ಲ. ಮಹಿಳಾ ನಾಟಕಗಳಿಗೂ ಪ್ರಾಮುಖ್ಯತೆ ಸಿಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ಅವರು ಮಹಿಳಾ ನಿರ್ದೇಶಕಿಯಾಗಿದ್ದರು ಎಂದರು.

ರಂಗಕರ್ಮಿ ಕೆ.ಆರ್.ಸುಮತಿ ಮಾತನಾಡಿ, ಮಾಲತಿ ಅವರು ನಾಟಕ ರಂಗ ಪ್ರವೇಶಿಸಲು ವನಿತೆಯರಿಗೆ ಆತ್ಮಸ್ಥೈರ್ಯ ತುಂಬಿದ್ದರು. ನಾನೂ ಅವರ ದಿಟ್ಟತನದಿಂದಲೇ ಈ ಕ್ಷೇತ್ರಕ್ಕೆ ಬಂದಿರುವೆ. ರಂಗಭೂಮಿ ನಾಟಕ ಮಾತ್ರ ಅಲ್ಲ. ಅದೊಂದು ಬೇರೆಯೇ ಲೋಕ. ಅದರಲ್ಲಿ ನಾಟಕ ಒಂದು ಭಾಗ ಮಾತ್ರ. ಅದು ಅರಿವಿನ ಪಯಣ ಎಂದರು

ರಂಗಾಯಣದ ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನಸ್ವಾಮಿ, ರಂಗೋತ್ಸವದ ಸಂಚಾಲಕ ಎಸ್.ರಾಮು ಪಾಲ್ಗೊಂಡಿದ್ದರು. ಬಳಿಕ ಬೆಂಗಳೂರಿನ ದೃಶ್ಯಕಾವ್ಯ ತಂಡದಿಂದ ‘ಮಾಯಾಬೇಟೆ’ ನಾಟಕ ಪ್ರದರ್ಶನವಾಯಿತು.

Leave a Reply

Your email address will not be published. Required fields are marked *