ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪ್ರತಿಭಟನೆ

ಬೆಳಗಾವಿ: ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಹಿರಿಸುವಂತೆ ಆಗ್ರಹಿಸಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸವದತ್ತಿ, ರಾಮದುರ್ಗ ತಾಲೂಕಿನ ವಿವಿಧ ಹಳ್ಳಿಗಳ ಜನರು ಪ್ರತಿಭಟನೆ ನಡೆಸಿದರು. ಬಳಿಕ ಪ್ರಾದೇಶ ಆಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ತೀವ್ರ ಬರ ಉದ್ಭವಿಸಿರುವ ಹಿನ್ನೆಲೆಯಲ್ಲಿ ಮುನವಳ್ಳಿ, ಮಬನೂರ, ಮದ್ಲೂರ, ಬೆನಕಟ್ಟಿ, ಜಾಲಿಕಟ್ಟಿ, ಜೀವಾಪೂರ, ಗೊಂದಿ ಕಲ್ಲೋಳ್ಳಿ , ರೈನಾಪೂರ ಸೇರಿದಂತೆ ಎರಡು ತಾಲೂಕಿನ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ತೀವ್ರರೂಪ ಪಡೆದುಕೊಂಡಿದೆ. ಮತ್ತೊಂದಡೆ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿಯುತ್ತಿರುವ ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ದೂರಿದರು.

ಮಲಪ್ರಭಾ ಎಡದಂಡೆ ಕಾಲುವೆಗಳ ಮೇಲೆ ಅವಲಂಬಿತವಾಗಿರುವ ರಾಮದುರ್ಗ, ಸವದತ್ತಿ ತಾಲೂಕಿನ ಕೆರೆಗಳು, ಬಾವಿಗಳು ಇದೀಗ ನೀರಿಲ್ಲದೆ ಬತ್ತಿ ಹೋಗಿವೆ. ಇದರಿಂದ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೀರಿಗಾಗಿ 1 ರಿಂದ 2 ಕಿಮೀ ದೂರ ಹೋಗಬೇಕಾಗಿದೆ. ಹಾಗಾಗಿ ಕೂಡಲೇ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಮನವಿ ಮೂಲಕ ಗ್ರಾಮಸ್ಥರು ವಿನಂತಿಸಿದರು.

ಕುಡಿಯು ನೀರಿಗಾಗಿ ಮಲಪ್ರಭಾ ಎಡದಂಡೆ ಕಾಲುವೆಗಳಿಗೆ ನೀರು ಬಿಡದಿದ್ದರೆ ಧಾರವಾಡ- ಗೋಕಾಕ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತ ಸೇನಾ ಜಿಲ್ಲಾಧ್ಯಕ್ಷ ಸೋಮು ರೈನಾಪೂರ ಎಚ್ಚರಿಕೆ ನೀಡಿದರು.

ಮಾರುತಿ ನಾಲವಡೆ, ಬಾಳಯ್ಯ ಗೌಡರ,ಕೆಂಚನಾಯಕ ಪಾಟೀಲ, ಕಲ್ಲಯ್ಯ ಕಟಗಲ್ಲಮಠ, ವಿಠಲ ಬೋಸ್ಲೆ, ಹನುಮಂತಗೌಡ ಪಾಟೀಲ, ಪಡೆಪ್ಪಾ ನರಿ ಇನ್ನಿತರರು ಇದ್ದರು.