ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಕ್ರಮ

ಬೆಳಗಾವಿ: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಬಸವನಕೊಳ್ಳ ನೀರಾವರಿ ಯೋಜನೆಗೆ ಹೊಸ ಮಾದರಿಯ ಪಂಪ್‌ಸೆಟ್ ಅಳವಡಿಸಲಾಗುವುದು. ಜತೆಗೆ ರಾಕಸಕೊಪ್ಪ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹಕ್ಕೆ ಕ್ರಮ ವಹಿಸಲಾಗುವುದು ಎಂದು ಶಾಸಕ ಅನಿಲ ಬೆನಕೆ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಒಂದು ವರ್ಷದ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾತನಾಡಿದ ಅವರು, ಭವಿಷ್ಯದ ದಿನಗಳಲ್ಲಿ ಮಹಾನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತವಾಗಿ ಮಳೆ ನೀರು ಸಂಗ್ರಹ, ಬಾವಿ ಸಂರಕ್ಷಣೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ.

ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ತರಲಾಗುವುದು. ಒಂದೇ ವರ್ಷದ ಆಡಳಿತ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಳಮಾರುತಿ ಬಡಾವಣೆ ಹಾಗೂ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗಿದೆ. ಕೆಲವೆಡೆ ಪೈಪ್‌ಲೈನ್ ದುರಸ್ತಿ ಮಾಡಲಾಗಿದೆ. ದಿನದ 24ಗಂಟೆಗಳ ಕಾಲ ನೀರು ಪೂರೈಕೆ ಮಾಡುವ ಯೋಜನೆಯನ್ನು ಎಲ್ಲ ವಾರ್ಡ್‌ಗಳಿಗೆ ವಿಸ್ತರಿಸಲಾಗುವುದು.

ಪಾಂಗುಳ್ ಗಲ್ಲಿ ರಸ್ತೆ ಅಗಲೀಕರಣವನ್ನು ಅಲ್ಲಿನ ಸಾರ್ವಜನಿಕರ ಸಮ್ಮಿತಿಯಿಂದ 3 ತಿಂಗಳಲ್ಲಿ ಮುಗಿಸಲಾಗುವುದು. ಬೆಂಡಿ ಬಜಾರ್ ರಸ್ತೆ ಅಗಲೀಕರಣ ಕಾಮಗಾರಿಯನ್ನು ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಕೈಗೊಳ್ಳಲಾಗುವುದು. ಪಾಲಿಕೆ ಹಾಗೂ ಸರ್ಕಾರದ 100 ಕೋಟಿ ರೂ. ವಿಶೇಷ ಅನುದಾನದಡಿ ಗುಣಮಟ್ಟದ ಸಿಸಿ ಹಾಗೂ ಡಾಂಬರ್ ರಸ್ತೆಗಳು ಹಾಗೂ ಒಳಚರಂಡಿಗಳನ್ನು ನಿರ್ಮಿಸಲಾಗಿದೆ ಎಂದರು.

ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಯೋಜನೆಯಡಿ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು 1.25 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿದಿಯಡಿ 1 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದ ಶಾಲಾ ಕಾಲೇಜುಗಳ ಅಭಿವೃದ್ಧಿಗೆ 2.85 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಶ್ರೀಮಂತರಿಗೆ ಸರ್ಕಾರಿ ಮನೆ ಭಾಗ್ಯ

ಶ್ರೀನಗರದ ಜೋಪಡಿಪಟ್ಟಿ ಪ್ರದೇಶದಲ್ಲಿ ನಿರ್ಮಿಸಿರುವ ಜಿ+3 ಬಹುಮಹಡಿ ಕಟ್ಟಡದಲ್ಲಿನ ಮನೆಗಳಿಗೆ ಬಡವರನ್ನು ಬಿಟ್ಟು ಶ್ರೀಮಂತ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರತ್ಯೇಕವಾಗಿ ರಚಿಸಿರುವ ಮೂರು ಪಟ್ಟಿಗಳನ್ನು ರದ್ದುಪಡಿಸಬೇಕು. ಸರ್ಕಾರವು ಬಡವರಿಗಾಗಿ ನಿರ್ಮಿಸಿರುವ ಮನೆಗಳಿಗೆ ಮಾಜಿ ಶಾಸಕರು, ಪಾಲಿಕೆ ಅಧಿಕಾರಿಗಳು ಅನರ್ಹರನ್ನು ಆಯ್ಕೆ ಮಾಡಿದ್ದಾರೆ. ನಗರದಲ್ಲಿ 50 ಲಕ್ಷ ರೂ. ಕೊಟ್ಟು ಮನೆ ಖರೀದಿಸಿದ ವ್ಯಕ್ತಿಯ ಹೆಸರನ್ನು ಆಶ್ರಯ ಮನೆಯ ಆಯ್ಕೆ ಪಟ್ಟಿಯಲ್ಲಿ ಸೇರಿಸಲಾಗಿದೆ. ಶೇ.40ರಷ್ಟು ಶ್ರೀಮಂತ್ರ ವ್ಯಕ್ತಿಗಳ ಹೆಸರು ಪಟ್ಟಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಆಯ್ಕೆ ಪಟ್ಟಿ ರದ್ದು ಪಡಿಸುವಂತೆ ಪ್ರಾದೇಶಿಕ ಆಯುಕ್ತರು,ಜಿಲ್ಲಾಧಿಕಾರಿ ಸೇರಿ ಅಗತ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಬೆನಕೆ ತಿಳಿಸಿದರು.