ಕುಡಿವ ನೀರು ಯೋಜನೆಗೆ ಒಪ್ಪಿಗೆ

ಕೋಟಿ ರೂ. ಮೊತ್ತದ ಯೋಜನೆ * ಡೆಡ್‌ಲೈನ್ ಒಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಟೆಂಡರ್ ವಾಪಸ್ ಷರತ್ತು>

ಶ್ರವಣ್‌ಕುಮಾರ್ ನಾಳ, ಪುತ್ತೂರು

ನೆಕ್ಕಿಲಾಡಿ ಡ್ಯಾಂನಿಂದ ಪುತ್ತೂರಿಗೆ ನೀರು ಪೂರೈಸುವ ಎರಡನೇ ಹಂತದ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಗೆ ಕೊನೆಗೂ ಸರ್ಕಾರ ಷರತ್ತುಬದ್ಧ ಒಪ್ಪಿಗೆ ನೀಡಿದೆ.

ಪುತ್ತೂರು ನಗರ ಸೇರಿದಂತೆ ಕೆಲವು ಗ್ರಾಮಾಂತರ ಪ್ರದೇಶಕ್ಕೂ ನೀರು ಸರಬರಾಜು ಮಾಡುವ 67 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ದೆಹಲಿ ಸಮೀಪದ ಗುರುಗಾಂವ್‌ನ ಸುಯೇಝ್ ಎಂಬ ಕಂಪನಿ ಟೆಂಡರ್ ಮೂಲಕ ಗುತ್ತಿಗೆ ಪಡೆದುಕೊಂಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ಕಾಮಗಾರಿ ಮುಗಿಸಬೇಕೆಂಬ ಡೆಡ್‌ಲೈನ್ ಸರ್ಕಾರ ನೀಡಿದೆ. ಒಂದು ವೇಳೆ ಡೆಡ್‌ಲೈನ್ ಒಳಗಾಗಿ ಯೋಜನೆ ಪೂರ್ಣಗೊಳ್ಳದಿದ್ದಲ್ಲಿ ಕಂಪನಿಗೆ ನೀಡಿದ ಟೆಂಡರ್ ಮೊತ್ತ ವಾಪಸು ನೀಡುವ ಷರತ್ತನ್ನು ಸರ್ಕಾರ ವಿಧಿಸಿದೆ.
67 ಕೋಟಿ ರೂ. ಯೋಜನೆ: ನಗರಸಭೆಯ ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲಿ ಮೊದಲು 42 ಕೋಟಿ ರೂ. ಮೊತ್ತದ ಎಡಿಬಿ ಯೊಜನೆ ಅಂಗೀಕರಿಸಿತ್ತು. ಕೋಲ್ಕತ್ತಾ ಮೂಲದ ಸಿಕೆಡಬ್ಲುೃ ಕಂಪನಿ ಡಿಪಿಆರ್ ತಯಾರಿಸಿದಾಗ ಮೊತ್ತ 4 ಕೋಟಿ ರೂ. ಹೆಚ್ಚಳವಾಗಿತ್ತು. ಅದಕ್ಕೆ ಜಿಎಸ್‌ಟಿ ಸೇರಿದಾಗ ಅಂತಿಮವಾಗಿ 67 ಕೋಟಿ ರೂ.ಗೆ ಏರಿತ್ತು. ಈ ಮೊತ್ತದ ಯೋಜನೆಗೆ ಕೌನ್ಸಿಲ್ ಮಂಜೂರು ನೀಡಲಾಗಿದ್ದು, ಜಿಲ್ಲಾಧಿಕಾರಿಗೆ ತೆರಳಿ ಅಲ್ಲಿಂದ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅಂತಿಮವಾಗಿ 67 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು.

ಡಿಪಿಆರ್ ಆಧಾರದಲ್ಲಿ ಸಮೀಕ್ಷೆ: ದೆಹಲಿ ಸಮೀಪದ ಗುರುಗಾಂವ್‌ನ ಸುಯೇಝ್ ಎಂಬ ಕಂಪನಿಯು ಪುತ್ತೂರು ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯ ಟೆಂಡರ್ ಮೂಲಕ ಗುತ್ತಿಗೆ ಪಡೆದುಕೊಂಡಿದೆ. ಈಗಾಗಲೇ ಕಂಪನಿ ಪ್ರತಿನಿಧಿ ಹಾಗೂ ತಾಂತ್ರಿಕ ತಂಡ ಪುತ್ತೂರಿಗೆ ಆಗಮಿಸಿ ಡಿಪಿಆರ್ ಸಮೀಕ್ಷೆ ನಡೆಸುತ್ತಿದ್ದಾರೆ. ಮುಂದಿನ 3 ವರ್ಷಗಳ ಒಳಗೆ ಅವರು ಯೋಜನೆ ಪೂರ್ಣಗೊಳಿಸಬೇಕಿದೆ. 8 ವರ್ಷಗಳ ನಿರ್ವಹಣೆ ಈ ಕಂಪನಿಗೆ ನೀಡಲಾಗಿದೆ. ಓ.ಎಂ. ಪರಿಕಲ್ಪನೆ ಅಡಿ ಕಾರ್ಯಾಚರಣೆ ಮತ್ತು ನಿರ್ವಹಣೆ ಇದೇ ಸಂಸ್ಥೆ ಮಾಡಲಿದೆ.

ಭೌಗೋಳಿಕ ಇಳಿಜಾರು ತತ್ವ ಬಳಕೆ: ನಗರದ ಸಮಗ್ರ ಅಧ್ಯಯನ ನಡೆಸಿ ನೂತನ ನೀರು ಸರಬರಾಜು ಯೋಜನೆಗೆ ಡಿಪಿಆರ್ ತಯಾರಿಸಲಾಗಿತ್ತು. ನೆಕ್ಕಿಲಾಡಿ ಅಣೆಕಟ್ಟಿನಿಂದ ಎತ್ತಲಾಗುವ ನೀರನ್ನು ರೇಚಕ ಸ್ಥಾವರದಲ್ಲಿ ಶುದ್ಧೀಕರಿಸಿ ಪುತ್ತೂರು ನಗರಕ್ಕೆ ತರಲಾಗುತ್ತಿದೆ. 3 ದಶಕದ ಹಿಂದಿನ ಹಳೆಯ ಪೈಪ್‌ಲೈನ್ ಈಗಲೂ ಕೆಲವೆಡೆ ಇದ್ದು, 10 ವರ್ಷಗಳ ಹಿಂದೆ 39 ಕೋಟಿ ವೆಚ್ಚದ ಎಡಿಬಿ ಯೋಜನೆಯಲ್ಲಿ ಸುಧಾರಿತ ಸರಬರಾಜು ಪ್ರಾಜೆಕ್ಟ್ ತರಲಾಗಿತ್ತು. ಅದೂ ಪೂರ್ಣ ಪ್ರಮಾಣದಲ್ಲಿ ವೈಜ್ಞಾನಿಕವಾಗಿಲ್ಲದ ಕಾರಣ ಹಲವು ಸಮಸ್ಯೆಗಳು ಕಾಡುತ್ತಿವೆ. ಹೊಸ ಯೋಜನೆಯಲ್ಲಿ ನೆಕ್ಕಿಲಾಡಿಯಿಂದ ಎಕ್ಸ್‌ಪ್ರೆಸ್ ಫೀಡರ್‌ನ ವಿದ್ಯುತ್ ಬಳಸಿ ನೀರು ನಗರಕ್ಕೆ ಬರಲಿದೆ. ಆದರೆ ನಗರ ವ್ಯಾಪ್ತಿಯೊಳಗೆ ವಿದ್ಯುತ್ ಬಳಸದೆ ಭೌಗೋಳಿಕ ಇಳಿಜಾರು ತತ್ವ ಬಳಸಿ ನೀರು ಪೂರೈಸಲಾಗುವುದು. ಇದಕ್ಕಾಗಿ ಪ್ರತ್ಯೇಕ ಪೈಪ್‌ಲೈನ್ ಅಳವಡಿಕೆ, ಪ್ರತ್ಯೇಕ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ನಡೆಯಲಿದೆ. ಹೊಸ ಟ್ರೀಟ್‌ಮೆಂಟ್ ಪ್ಲಾೃಂಟ್, ಹೊಸ ಜಾಕ್‌ವೆಲ್, ಹೊಸ ಪೈಪ್‌ಲೈನ್ ನಿರ್ಮಾಣವಾಗಲಿದೆ.

67 ಕೋಟಿ ರೂ. ಮೊತ್ತದ ಯೋಜನೆಯಲ್ಲಿ 10 ಶೇ. ಮೊತ್ತವನ್ನು ನಗರಸಭೆ ಭರಿಸಬೇಕು. ಉಳಿದ ಮೊತ್ತವನ್ನು ಎಡಿಬಿಯಿಂದ ಸಾಲರೂಪದಲ್ಲಿ ಪಡೆಯಲಾಗುತ್ತದೆ. ಪುತ್ತೂರು ನಗರಕ್ಕೆ ದಿನವೊಂದಕ್ಕೆ 75 ಲಕ್ಷ ಲೀಟರ್ ನೀರಿನ ಆವಶ್ಯಕತೆಯಿದ್ದು, ಹೊಸ ಪ್ರಾಜೆಕ್ಟ್‌ನಲ್ಲಿ ಹಳೇ ಪೈಪ್ ಲೈನ್ ಸಂಪೂರ್ಣ ತೆರವು ಮಾಡಿ ಮೊದಲ ಮತ್ತು ಎರಡನೇ ಹಂತದ ಯೋಜನೆಯನ್ನು ಸಮನ್ವಯ ಮಾಡಲಾಗುತ್ತದೆ.
ರೂಪಾ ಶೆಟ್ಟಿ
ಪುತ್ತೂರು ನಗರಸಭಾ ಆಯುಕ್ತರು