More

    ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ

    ಚಿಕ್ಕಮಗಳೂರು: ಬೇಸಿಗೆ ಸಂದರ್ಭ ಜಿಲ್ಲೆಯ 303 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವ ಬಗ್ಗೆ ಮಾಹಿತಿ ಬಂದಿದೆ. ಜಿಲ್ಲೆಯಲ್ಲಿ ಎಲ್ಲಿಯೇ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಉಂಟಾದಲ್ಲಿ ಶೀಘ್ರವೇ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ತಿಳಿಸಿದರು.

    ನಗರದ ಪ್ರೆಸ್‌ಕ್ಲಬ್‌ನಿಂದ ಮಂಗಳವಾರ ಆಯೋಜಿಸಿದ್ದ ತಿಂಗಳ ಅತಿಥಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯ 10 ಗ್ರಾಪಂನ 11 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇಲ್ಲಿ ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
    9 ತಾಲೂಕುಗಳ ಪೈಕಿ 8 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ ಸಾಧಾರಣ ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಿಸಿದೆ. ಕುಡಿಯುವ ನೀರಿನ ಸಮಸ್ಯೆ ಎಲ್ಲೆಲ್ಲಿ ಎದುರಾಗಬಹುದು ಎಂದು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಎಲ್ಲಿ ಸಮಸ್ಯೆ ಕಂಡುಬರುತ್ತೋ ಅಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸ್ಥಳೀಯವಾಗಿ ದೊರೆಯುವ ನೀರಿನ ಮೂಲ ಹಾಗೂ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
    ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಕ್ರಮವಹಿಸಲಾಗಿದೆ. ಮುಂದಿನ 28 ವಾರಗಳಿಗೆ ಸಾಕಾಗುವಷ್ಟು ಮೇವು ದಾಸ್ತಾನಿದೆ. ಅಮೃತ್ ಮಹಲ್ ಕಾವಲ್‌ನಲ್ಲಿ ಮೇವು ಬೆಳೆಯಲಾಗುತ್ತಿದೆ. ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
    ಮಳೆ ಕೊರತೆಯಿಂದ ಫಸಲಿನಲ್ಲಿ ಇಳುವರಿ ಕಡಿಮೆ ಆಗಿರುವುದು ನಿಜ. ಮುಂಗಾರಿನಲ್ಲಿ ಮಳೆ ಕಡಿಮೆಯಾಗಿ ಬಿತ್ತನೆ ಕಾರ್ಯ ಕುಂಠಿತವಾಗಿತ್ತು. ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಉತ್ತಮವಾಗಿದೆ. ಹೀಗಾಗಿ ಉತ್ಪಾದನೆಯಲ್ಲಿ ಕಡಿಮೆಯಾಗಿದೆ. ತೋಟಗಾರಿಕೆ ಬೆಳೆಯಲ್ಲೂ ಶೇ.40ರಷ್ಟು ಇಳುವರಿ ಕಡಿಮೆಯಾಗಿದೆ. ಅಡಕೆಗೆ ಎಲೆಚುಕ್ಕೆ ರೋಗ, ಹಳದಿ ಎಲೆರೋಗ ಬಾಧೆಯಿಂದ ಇಳುವರಿ ಕುಂಠಿತವಾಗಿದೆ. ತೆಂಗು ಬೆಳೆಗೆ ಕಪ್ಪು ತಲೆ ಹುಳು ಬಾಧೆಯಿಂದ ನಷ್ಟ ಉಂಟಾಗಿದೆ. ಇದಕ್ಕೆ ಔಷಧ ವಿತರಿಸಲಾಗಿದೆ ಎಂದರು.
    4 ಕೆಎಫ್‌ಡಿ ಪ್ರಕರಣ ದೃಢ: ಜಿಲ್ಲೆಯ ಕೊಪ್ಪ ಮತ್ತು ಶೃಂಗೇರಿ ಭಾಗದಲ್ಲಿ ನಾಲ್ಕು ಮಂಗನಕಾಯಿಲೆ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಕಾಯಿಲೆ ನಿಯಂತ್ರಣ ಕುರಿತು ಇತ್ತೀಚೆಗೆ ಶಿವಮೊಗ್ಗದಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಸಲಾಗಿದೆ. ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ನಿಯಂತ್ರಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ಜನರು ಕಾಡಿಗೆ ತೆರಳಿದ ವೇಳೆ ಏನೇನು ಮುಂಜಾಗ್ರತೆ ವಹಿಸಬೇಕೆಂಬ ಮಾಹಿತಿ ಮತ್ತು ತಿಳಿವಳಿಕೆಯನ್ನು ನೀಡಲಾಗುತ್ತಿದೆ ಎಂದು ಡಾ. ಬಿ.ಗೋಪಾಲಕೃಷ್ಣ ತಿಳಿಸಿದರು.
    ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ: ಜಿಪಂ ಹಾಗೂ ತಾಪಂಗಳಿಗೆ ಜನಪ್ರತಿನಿಧಿಗಳು ಇಲ್ಲದಿದ್ದರೂ ಕಾರ್ಯಗಳು ನಡೆಯುತ್ತಿವೆ. ಯಾವ ಕಾರಣಕ್ಕೂ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ ಎಂದು ಡಾ. ಬಿ.ಗೋಪಾಲಕೃಷ್ಣ ತಿಳಿಸಿದರು. ಇದುವರೆಗೂ ಜಿಪಂ ವ್ಯಾಪ್ತಿಯ ಎಲ್ಲ ಇಲಾಖೆಗಳಲ್ಲಿ ಶೇ.90ರಷ್ಟು ಕಾರ್ಯಕ್ರಮಗಳು ಪ್ರಗತಿಯಲ್ಲಿವೆ. ವರ್ಷಾಂತ್ಯದ ಅವಸರದ ಕಾಮಗಾರಿಗಳಿಗೆ ಆಸ್ಪದ ನೀಡದೆ ಕಾಲ ಕಾಲಕ್ಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
    ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ. ಯೋಗೀಶ್, ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್, ಕಾರ್ಯದರ್ಶಿ ತಾರಾನಾಥ್, ಖಜಾಂಚಿ ಗೋಪಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts