ಕುಡಿಯುವ ನೀರಿಗೆ ಪರದಾಟ

ಕೋಟ: ಈ ಬಾರಿಯ ಬೇಸಿಗೆ ಜೀವ ಜಲಕ್ಕೆ ಹಾಹಾಕಾರ ಬರುವಂತೆ ಮಾಡಿದೆ.

ಕಳೆದ ಮಳೆಗಾಲ ಬೇಗನೆ ಮಾಯವಾದ ಕಾರಣದಿಂದಲೋ ಅಥವಾ ಮನುಷ್ಯ ಅತಿಯಾಗಿ ಪ್ರಕೃತಿಯ ಶೋಷಣೆ ಮಾಡಿದ್ದರಿಮದಲೋ ಏನೋ ನೀರಿನ ಸಮಸ್ಯೆ ಎಲ್ಲ ಕಡೆ ಎದುರಾಗಿರುವುದು ಸತ್ಯ. ಏಪ್ರಿಲ್ ಮೊದಲ ವಾರದಲ್ಲೇ ಹೀಗಾದರೆ ಮುಂದೇನು ಎಂಬ ಚಿಂತೆ ಕೂಡ ಜನರನ್ನು ಕಾಡಲು ಪ್ರಾರಂಭಿಸಿದೆ.

ಸಾಮಾನ್ಯವಾಗಿ ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯಿತಿ, ಗ್ರಾಮೀಣ ಭಾಗವಾದ ಕೋಟ, ಕೋಟತ್ತಟ್ಟು, ಪಾಂಡೇಶ್ವರ, ಐರೋಡಿ, ಬೇಳೂರು, ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ನೀರಿನ ಅಭಾವ ತಲೆದೋರಿದ್ದು ಅಲ್ಲಿ ನೀರೊದಗಿಸಲು ಪಂಚಾಯಿತಿಗಳು ಸನ್ನದ್ಧವಾಗಿವೆ. ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣೂರು, ಹೊನ್ನಾರಿ, ಮೂಡುಗಿಳಿಯಾರು, ಕೋಟತ್ತಟ್ಟು ವ್ಯಾಪ್ತಿಯ ಹಂದಟ್ಟು, ವಡ್ಡರ್ಸೆ ಹಾಗೂ ಬೇಳೂರು ಗ್ರಾಪಂ ಕೆಲವು ಭಾಗಗಳಲ್ಲಿ ನೀರಿನ ಅಭಾವ ಎದುರಾಗಿದ್ದು ಆ ಭಾಗಗಳಲ್ಲಿ ಪಂಚಾಯಿತಿ ಪ್ರತಿನಿಧಿಗಳ ಮೂಲಕ ಒತ್ತಡ ಹೇರಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಏಲಂ ಕರೆಯಲಾಗಿದೆ.

ಹಿಂದೆ ಎಲ್ಲಿ ನೋಡಿದರಲ್ಲಿ ಮರಗಿಡಗಳಿಂದ ಕೂಡಿದ ಹಾಡಿ, ಕಾಡುಗಳಿಂದ ಇರುತ್ತಿದ್ದ ಪ್ರದೇಶಗಳಿಂದ ಬೋಳಾಕಾರದ ಗುಡ್ಡವಾಗಿಯೋ ಅಥವಾ ಖಾಲಿ ಬಿದ್ದ ಪ್ರದೇಶವಾಗಿಯೋ ಕಾಣುತ್ತಿವೆ. ಕೆಲವೆಡೆ ಮಣ್ಣು ತೆಗೆದು ಇನ್ನೊಂದೆಡೆ ಸಾಗಿಸುವ ಕೆಲಸವೂ ನಡೆಯುತ್ತಿದೆ. ಇದರಿಂದ ತಣ್ಣನೆಯ ಪ್ರದೇಶ ಮರೆಯಾಗಿ ರಣ ಬಿಸಿಲಿನಿಂದ ಮನುಷ್ಯ ಕುಲ ತಾನು ತೋಡಿಕೊಂಡ ಹೊಂಡದಲ್ಲಿ ತಾನೇ ಬೀಳುವಂತಾಗಿದೆ.

ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಕಾಣುವ ಕಾಂಕ್ರೀಟ್ ಕಟ್ಟಡ, ರಸ್ತೆ, ಕಾಂಕ್ರೀಟ್ ಮನೆಯಂಗಳ ಈ ಗ್ರಾಮೀಣ ಭಾಗಗಳಲ್ಲೂ ಕಾಣಸಿಗುತ್ತಿರುವುದರಿಂದ ನೀರಿನ ಸಮಸ್ಯೆ ತಲೆದೋರಿದೆ. ಸಣ್ಣಸಣ್ಣ ರಸ್ತೆಗಳು, ಚರಂಡಿ ಹೀಗೆ ನಾನಾ ರೀತಿ ಕಾಂಕ್ರೀಟ್ ಅಳವಡಿಕೆಯಿಂದಲೇ ಪ್ರಾಣಿ, ಜಲಚರ, ಪಕ್ಷಿಸಂಕುಲಕ್ಕೂ ಸಂಚಕಾರ ಬಂದೊದಗಿದೆ.

ಇರುವ ಸಂಪನ್ಮೂಲ ಬಳಕೆ ಹೇಗೆ?: ಕೆಲವು ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಬಾವಿಗಳಿದ್ದರೂ ಅದರ ಸದ್ಭಳಕೆ ಮಾತ್ರ ಶೂನ್ಯ ಎಂಬಂತಾಗಿದೆ. ಕೋಟ ಗ್ರಾಪಂ ವ್ಯಾಪ್ತಿಯ ಕಾಸನಗುಂದ್, ಮಣೂರು, ಪಡುಕರೆ ವ್ಯಾಪ್ತಿಯಲ್ಲಿ ಬಾವಿ ಇದ್ದರೂ ಅದನ್ನೂ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯೂ ಇದರಿಂದ ಹೊರತಾಗಿಲ್ಲ. ಕುಡಿಯುವ ನೀರು ಪೂರೈಸುವ ಬಾವಿ ಇದ್ದರೂ ಅದರ ಹೂಳೆತ್ತಿ ಬೇಸಿಗೆ ಕಾಲದಲ್ಲಿ ಶುದ್ಧ ನೀರು ಪೂರೈಸಲು ಅನುವಾಗುವಂತೆ ಮಾಡದಿದ್ದರೆ ರುವ ಸಂಪನ್ಮೂಲಗಳ ಸದ್ಭಳಕೆ ಹೇಗೆ ಎಂಬುದರ ಬಗ್ಗೆ ಯೋಚಿಸಬೇಕಾಗಿದೆ.

ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವೊಂದು ಭಾಗಗಳಲ್ಲಿ ನೀರಿನ ಅಭಾವ ಎದುರಾಗಿದೆ. ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲೆಲ್ಲ ಟ್ಯಾಂಕರ್ ಮೂಲಕ ನೀರೊದಗಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
|ವನಿತಾ ಶ್ರೀಧರ ಆಚಾರ್ಯ, ಅಧ್ಯಕ್ಷರು ಕೋಟ ಗ್ರಾಪಂ

ಇಂದಿನ ಕಾಲಘಟ್ಟದಲ್ಲಿ ಕೆರೆಗಳನ್ನು ಮುಚ್ಚಿ ನಾಶ ಮಾಡುತ್ತಿರುವುದು, ಅತಿಯಾಗಿ ಮರಗಳ ಬುಡಕ್ಕೆ ಕೊಡಲಿ ಏಟು, ಬೆಟ್ಟ ಗುಡ್ಡವೆಂಬುವುದು ರೆಸಾರ್ಟ್‌ಮಯವಾಘಿರುವುದು, ಡಾಂಬರು ರಸ್ತೆ ಹೋಗಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿರುವುದು ಇವೆಲ್ಲದರಿಂದ ನಮ್ಮ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿದೆ. ಇದರ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕು. ಮಕ್ಕಳಿಗೆ ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ.
|ಹ.ರಾ ವಿನಯಚಂದ್ರ ಸಾಸ್ತಾನ, ಪರಿಸರ ಪ್ರೇಮಿ

ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆ ಇಷ್ಟರವರಗೆ ಇರಲಿಲ್ಲ್ಲ. ಮುಂದೆ ಕೊರತೆಯಾದರೆ ಟ್ಯಾಂಕರ್‌ಗಳ ಮೂಲಕ ವ್ಯವಸ್ಥೆ ಕಲ್ಪಿಸಲಾಗುವುದು.
|ಸುಧಾಕರ್, ಮುಖ್ಯಾಧಿಕಾರಿ ಸಾಲಿಗ್ರಾಮ ಪಪಂ

ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಕುದ್ರು ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಉಪ್ಪು ಮಿಶ್ರಿತ ನೀರಿನ ಸಮಸ್ಯೆ ಎದುರಾಗಿದೆ. ಅಂಥ ಭಾಗಗಳಲ್ಲಿ ಪೈಪ್ ಲೈನ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
|ಸುಭಾಶ್ ಖಾರ್ವಿ, ಐರೋಡಿ ಗ್ರಾಪಂ ಪಿಡಿಒ