ಮುಂಡಗೋಡ: ತಾಲೂಕಿನ ಕಳಕಿಕಾರೆ ಗ್ರಾಮದಲ್ಲಿ ಕಳೆದ ಎಂಟು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆ.
ತಾಲೂಕಿನ ಮೈನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಕಿಕಾರೆ ಗ್ರಾಮದಲ್ಲಿ ಗೌಳಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮದಲ್ಲಿನ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಸಮರ್ಪಕವಾಗಿ ನೀರು ಬರುತ್ತಿಲ್ಲ. ಹೀಗಾಗಿ ಗ್ರಾಪಂನವರು ಟ್ರ್ಯಾಕ್ಟರ್ ಟ್ಯಾಂಕರ್ ಮೂಲಕ ಜನರಿಗೆ ಕುಡಿಯುವ ನೀರು ಪೂರೈಸುತ್ತಿದ್ದಾರೆ.
ಕಳಕಿಕಾರೆ ಹಾಗೂ ಅಕ್ಕಪಕ್ಕದ ಕೆಲ ಗ್ರಾಮಗಳಿಗೆ ಬೇಸಿಗೆ ಸಮಯದಲ್ಲಿ ಪ್ರತಿವರ್ಷವೂ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಗ್ರಾಮ ಪಂಚಾಯಿತಿಯವರು ಖಾಸಗಿ ಬೋರ್‌ವೆಲ್ ಅಥವಾ ಟ್ಯಾಂಕರ್ ಮೂಲಕ ನೀರು ಪೂರೈಸುವುದು ಸಾಮಾನ್ಯವಾಗಿದೆ. ಬೇಸಿಗೆಯಲ್ಲಿ ಸಮಸ್ಯೆಯಾಗದಂತೆ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸುವುದು ಅವಶ್ಯವಿದೆ ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.
ಅಂತರ್ಜಲಮಟ್ಟ ಕುಸಿತದಿಂದ ಕುಡಿಯುವ ನೀರು ಸಿಗುತ್ತಿಲ್ಲ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು. ಎರಡು ಕೊಳವೆ ಬಾವಿ ಕೊರೆಯಿಸಲು ಸ್ಥಳ ನಿಗದಿ ಪಡಿಸಲಾಗಿದೆ.
ಮಂಜುನಾಥ, ಪಿಡಿಒ ಮೈನಳ್ಳಿ