ಚನ್ನಗಿರಿ: ಗ್ರಾಮ ಮತ್ತು ರೈತರ ಜೀವನಾಡಿಯಾಗಿದ್ದ ಕೆರೆಗಳು ಬಿಸಿಲಿನ ತಾಪಕ್ಕೆ ಬತ್ತಿ ಹೋಗುತ್ತಿದೆ. ಜನರು ಹಣ ಕೊಟ್ಟು ನೀರನ್ನು ಖರೀದಿ ಮಾಡುವ ಪರಿಸ್ಥಿತಿ ಉಂಟಾಗಿದೆ. ಇದು ಮುಂದುವರಿದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದರಲ್ಲಿ ಆಶ್ಚರ್ಯವಿಲ್ಲ.

ತಾಲೂಕಿನ ಮುಂಗಾರು ಕೆರೆಗಳು ಉತ್ತಮ ಪ್ರಮಾಣದಲ್ಲಿ ಮಳೆಯಾಗಿದ್ದರೂ ಬರಗಾಲ ಎದುರಿಸುವಂತಾಗಿದೆ. ಕೆರೆಗಳು ಸಂಪೂರ್ಣ ಬತ್ತುತ್ತಿದೆ. ದನಕರುಗಳಿಗೆ ಹಾಗೂ ಜನರಿಗೆ ಕುಡಿಯಲು ನೀರು ಸಿಗದೆ ಪರದಾಡುತ್ತಿದ್ದಾರೆ.
ತಾಲೂಕು ಹೆಚ್ಚು ಗ್ರಾಮಗಳನ್ನು ಆಶ್ರಯಿಸಿದೆ. ಇಲ್ಲಿನ ಶೇ.98 ರಷ್ಟು ಜನರು ಕೃಷಿ ನಂಬಿ ಜೀವನ ಸಾಗಿಸುತ್ತಿದ್ದು ದಿನ ಬೆಳಗಾದರೆ ದನಕರುಗಳಿಗೆ ನೀರು ಕುಡಿಸಲು ಹಾಗೂ ಮೈತೊಳೆಸಲು ಕೆರೆಗೆ ಕರೆದುಕೊಂಡು ಹೋಗುತ್ತಿದ್ದರು. ಗ್ರಾಮದಲ್ಲಿ ಕೆರೆ ಇದ್ದರೆ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಮತ್ತು ಕುಡಿಯುವ ನೀರಿನ ಸಮಸ್ಯೆ ಕಾಡುವುದಿಲ್ಲ. ಆದರೆ ಅಂತಹ ಕೆರೆಗಳಲ್ಲಿ ನೀರು ಸಂಪೂರ್ಣ ಬತ್ತಿ ಹೋಗುತ್ತಿದ್ದು ರೈತಾಪಿ ಜನರ ಜೀವನ ಸಂಕಷ್ಟವನ್ನು ಅನುಭವಿಸಲು ಸಿದ್ಧವಾಗಬೇಕಾಗಿದೆ.
ತಾಲೂಕಿನ ಅನೇಕ ಕೆರೆಗಳು ಮಳೆ ಆಶ್ರಯಿಸಿ ತುಂಬಬೇಕು, ಬೇರಾವ ಕಡೆಯಿಂದಲೂ ನೀರು ಸಂಗ್ರಹವಾಗುವುದಿಲ್ಲ. ಉಬ್ರಾಣಿ ಏತ ನೀರಾವರಿ ಯೋಜನೆ ಪ್ರಾರಂಭವಾದ ನಂತರ ತಾಲೂಕಿನ ಅನೇಕ ಕೆರೆಗಳನ್ನು ಯೋಜನೆಯಲ್ಲಿ ಸೇರ್ಪಡೆ ಮಾಡಲಾಯಿತು. ಯೋಜನೆಯಲ್ಲಿ ಗ್ರಾಮದ ಕೆರೆಗಳು ಸೇರಿಕೊಂಡರು ಕೊನೆಭಾಗದ ಕೆರೆಗಳಿಗೆ ನೀರು ಸರಿಯಾಗಿ ಹರಿಯದೆ ಯಾವಾಗಲು ಒಣಗಿ ಹೋಗುತ್ತದೆ. ಕೆರೆಗಳಲ್ಲಿ ನೀರು ಇರದೆ ಅಂತರ್ಜಲ ಕುಸಿದು ಹೋಗಿದೆ. ನೀರಿಗಾಗಿ ರೈತರು ಸಾಲ ಮಾಡಿ 1500 ಸಾವಿರ ಅಡಿ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ.
ಜಿಪಂ ವ್ಯಾಪ್ತಿಗೆ ಸೇರಿದ 95 ಕೆರೆಗಳಲ್ಲಿ ನೀರು ಇಲ್ಲದೆ ಬತ್ತಿ ಹೋಗುತ್ತಿದೆ. ದೇವರಹಳ್ಳಿ, ಲಿಂಗದಹಳ್ಳಿ, ಬಸವನಹಳ್ಳಿ, ಅಜ್ಜಿಹಳ್ಳಿ, ಚಿಕ್ಕೂಲಿಕೆರೆ, ತಿಪ್ಪಗೊಂಡನಹಳ್ಳಿ, ರಾಜಗೊಂಡನಹಳ್ಳಿ, ಹೊನ್ನೇಬಾಗಿ, ಪಾಂಡೋಮಟ್ಟಿ, ಗಾಣದಕಟ್ಟೆ ಸೇರಿ ಎಲ್ಲ ಕೆರೆಗಳಲ್ಲಿ ಅರ್ಧ ನೀರು ಖಾಲಿಯಾಗಿ ಏಪ್ರಿಲ್ ಅಂತ್ಯದವರೆಗೆ ಸಂಪೂರ್ಣ ಖಾಲಿಯಾಗುವ ಸಾಧ್ಯತೆ ಇದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದ ಕೊರಟಿಕೆರೆ, ಬೆಂಕಿಕೆರೆ, ಹೊಸಕೆರೆ, ನೀತಿಗೆರೆ, ಹೆಬ್ಬಳಗೆರೆ ಕೆರೆ, ಮೇಳನಾಯ್ಕನಕಟ್ಟೆ ಗ್ರಾಮದ ಕೆರೆಗಳಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದ್ದು ಆ ಭಾಗದ ಜನರು ಕುಡಿಯುವ ನೀರಿಗಾಗಿ ಪರಡಾಡುತ್ತಿದ್ದಾರೆ.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳು ನೀರು ಇಲ್ಲದೆ ಒಣಗಿ ಹೋಗಿದೆ. ಕೆರೆಗಳಲ್ಲಿ ನೀರು ಇದ್ದರೆ ಸುತ್ತಮುತ್ತಲಿನ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಉಬ್ರಾಣಿ ಏತ ನೀರಾವರಿ ಯೋಜನೆ ಮೂಲಕ ನೀರು ಹರಿದರೆ ನೀರು ಕೆರೆಗಳಲ್ಲಿ ಸಂಗ್ರಹವಾಗುತ್ತದೆ.
| ವಿ. ರುದ್ರಮುನಿ, ಸಹಾಯಕ ಇಂಜಿನಿಯರ್ ಸಣ್ಣ ನೀರಾವರಿ ಇಲಾಖೆ.
ಮಳೆ ಆಶ್ರಯಿಸಿ ಕೆರೆಗಳು ತುಂಬಬೇಕು. ಹಿಂದಿನ ವರ್ಷ ಉತ್ತಮ ಮಳೆಯಾಗಿದ್ದರೂ ಕೆರೆಗಳಲ್ಲಿ ನೀರು ಇಲ್ಲದಂತಾಗಿದೆ. ಬೇರೆ ಕಡೆಯಿಂದ ಕೆರೆಗಳಿಗೆ ನೀರು ಹರಿದು ಬರುವುದಿಲ್ಲ, ಕುಡಿಯುವ ನೀರಿನ ಸಮಸ್ಯೆ ಬರುವ ಸಾಧ್ಯತೆ ಇರುವ ಕಾರಣ ಪೂರ್ವಸಿದ್ಧತೆಯಾಗಿ ಗ್ರಾಮಗಳ ಅಂದಾಜು ಪಟ್ಟಿಯನ್ನು ಮಾಡಲಾಗುತ್ತಿದೆ. ಕೂಡಲೇ ಸಮಸ್ಯೆಗೆ ಸ್ಪಂದಿಸುವ ಕೆಲಸ ಇಲಾಖೆಯಿಂದ ಮಾಡಲಾಗುತ್ತದೆ.
| ಬಿ.ಎಂ. ಲೋಹಿತ್, ಕುಡಿಯುವ ನೀರು ಮತ್ತು ನೈರ್ಮಲ್ಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್
ಗ್ರಾಮಗಳಲ್ಲಿ ಕೆರೆಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದಾರೆ, ಜನಪ್ರತಿನಿಧಿಗಳು ಗ್ರಾಮದ ಕಡೆಗೆ ತಿರುಗಿ ನೋಡುತ್ತಿಲ್ಲ ಮತ್ತು ರೈತರ ಸಮಸ್ಯೆ ಆಲಿಸುತ್ತಿಲ್ಲ. ಉಬ್ರಾಣಿ ಯೋಜನೆ ನೀರು ಕೆರೆಗಳಿಗೆ ಕೆಲವು ದಿನ ಹರಿಸಿದರೆ ರೈತರ ಬದುಕು ಹಸನಾಗುತ್ತದೆ.
| ರಂಗನಾಥ್, ಅಡಕೆ ತೋಟದ ಮಾಲೀಕ, ಹೊನ್ನೇಬಾಗಿ ಚನ್ನಗಿರಿ