ಸರ್ಕಾರಿ ಬಸ್ಸುಗಳಲ್ಲಿ ಕುಡಿವ ನೀರಿನ ಸೌಲಭ್ಯ

ಬಳ್ಳಾರಿ: ಮಕ್ಕಳು, ಮಹಿಳೆಯರು ಹಾಗೂ ಪ್ರಯಾಣಿಕರಿಗೆ ಕುಡಿವ ನೀರಿನ ದಾಹನೀಗಿಸಲು ಬಸ್ ಗಳಲ್ಲಿ ಸನ್ಮಾರ್ಗ ಗೆಳೆಯರ ಬಳಗದಿಂದ ಕುಡಿವ ನೀರಿನ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಎಸ್.ಬಿ.ಹಂದ್ರಾಳ್ ಹೇಳಿದರು.

ನಗರದ ರಾಯಲ್ ವೃತ್ತದ ಬಳಿಯ ಸಿಟಿ ಟರ್ಮಿನಲ್ ಬಸ್ ನಿಲ್ದಾಣದಲ್ಲಿ ಸನ್ಮಾರ್ಗ ಗೆಳೆಯರ ಬಳಗದಿಂದ ಸರ್ಕಾರಿ ಬಸ್ ಗಳಲ್ಲಿ ಅಳವಡಿಸಿದ್ದ ಕುಡಿವ ನೀರಿನ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಬಿಸಿಲಿನ ಶಾಖ ಹೆಚ್ಚಾಗಿ ಅಂತರ್ಜಲ ಮಟ್ಟ ಕುಸಿದು ಜನತೆ ನಿತ್ಯ ಕುಡಿವ ನೀರಿಗಾಗಿ ಪರಿತಪಿಸುವಂತಾಗಿದೆ. ಈ ನಿಟ್ಟಿನಲ್ಲಿ ದೂರದ ಊರಿಗೆ ಸಂಚರಿಸುವ ಪ್ರಯಾಣಿಕರಿಗಾಗಿ ಬಸ್ ನಲ್ಲಿ ಶುದ್ಧ ಕುಡಿವ ನೀರಿನ ಕ್ಯಾನ್ ಅಳವಡಿಸಿರುವುದು ಸಂತಸದ ವಿಷಯ. ಪ್ರಯಾಣಿಕರು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು. ನೀರನ್ನು ವೃತಾ ಪೋಲಾಗದಂತೆ ಕಾಪಾಡಬೇಕು ಎಂದರು.

ಬಳಗದ ಕಾರ್ಯದರ್ಶಿ ಚಂದ್ರಶೇಖರ್ ಆಚಾರ್ ಮಾತನಾಡಿ, ಕಳೆದ ಐದು ವರ್ಷಗಳಿಂದ ಬೇಸಿಗೆಯಲ್ಲಿ ಸರ್ಕಾರಿ ಬಸ್ ಗಳಲ್ಲಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೈದರಾಬಾದ್, ಬೆಂಗಳೂರು, ಧರ್ಮಸ್ಥಳ, ಶ್ರೀಶೈಲ ಸೇರಿ ಹೊರ ರಾಜ್ಯ, ನಗರ, ಗ್ರಾಮೀಣ ಭಾಗಕ್ಕೆ ಸಂಚರಿಸುವ ಸುಮಾರು 85ಕ್ಕೂ ಹೆಚ್ಚು ಬಸ್ ಗಳಿಗೆ 25ಲೀಟರ್ ನ ಶುದ್ಧ ಕುಡಿವ ನೀರಿನ ಕ್ಯಾನ್ ಗಳನ್ನು ಅಳವಡಿಸಲಾಗಿದೆ ಎಂದರು.

ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಆರ್.ಚಂದ್ರಶೇಖರ್ ಇತರರಿದ್ದರು.