ರಾಜ್ಯದಲ್ಲಿ 2,999 ಗ್ರಾಮಗಳಿಗೆ ಟ್ಯಾಂಕರ್ ಕುಡಿವ ನೀರು ಸರಬರಾಜು ಇತಿಹಾಸದಲ್ಲೇ ಮೊದಲು ಎಂದ ಸಚಿವ

ಬೆಳಗಾವಿ: ರಾಜ್ಯದಲ್ಲಿ ಒಟ್ಟು 2,999 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಇತಿಹಾಸದಲ್ಲಿ ಇದು ಮೊದಲು ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗದಗ, ರಾಮನಗರ, ಕೊಡಗು, ಚಾಮರಾಜನಗರ, ಧಾರವಾಡ ಜಿಲ್ಲೆಗಳಿಗೆ ಟ್ಯಾಂಕರ್ ನೀರು ಪೂರೈಕೆ ಆಗುತ್ತಿಲ್ಲ ಎಂದರು.

ಬರಪರಿಸ್ಥಿತಿ ನಿರ್ವಹಣೆಯಲ್ಲಿ ಹಾಗೂ ನೀರು ಕುಡಿಯುವ ಒದಗಿಸುವ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ಎಲ್ಲ ಸಹಕಾರ ದೊರೆತಿದೆ. ಕುಡಿಯುವ ನೀರಿನ ಸಮಸ್ಯಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಪರಿಸರ ಸಂರಕ್ಷಣೆ ಮಾಡದಿದ್ದರೆ ನಮಗೆಲ್ಲಾ ಸಮಸ್ಯೆ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.
ಮಾನವ ದಿನಗಳಲ್ಲಿ ದಾಖಲೆ ಮಾಡಿದ್ದೇವೆ. ರಾಜ್ಯದಲ್ಲಿ 13 ಕೋಟಿ ಗುರಿ ಇಟ್ಟಿದ್ದೇವೆ. ಬೆಳಗಾವಿ ಜಿಲ್ಲೆಯಲ್ಲಿ 1.18 ಕೋಟಿ ಮಾನವ ಗುರಿಯನ್ನು ನೀಡಿದ್ದೇವೆ. 485 ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಕೆಲಸವನ್ನು ಸರ್ಕಾರ ಮಾಡಿದೆ‌ ಎಂದು ಹೇಳಿದರು.

ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗಬಾರದು. ಮೇವಿನ ಬ್ಯಾಂಕ್ ನಿರ್ಮಾಣಕ್ಕೆ ಟೆಂಡರ್ ಕರೆಯಲು ಸೂಚಿಸಲಾಗಿದೆ. ಏಳು ವಾರಗಳಿಗೆ ಸಾಕಾಗುವಷ್ಟು ಮೇವು ಶೇಖರಣೆ ಇದೆ. ಮೇ 28ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಲಾಗುವುದು ಎಂದರು.

ಕುಡಿಯುವ ‌ನೀರಿನ ಅಭಾವ ಇರುವ ಗ್ರಾಮಗಳಿಗೆ ಕುಡಿಯುವ ನೀರಿನ‌ ಟ್ಯಾಂಕರ್​ನಲ್ಲಿ ನೀರು ಸರಬರಾಜು ಮಾಡಲು ಎಲ್ಲ ತಹಸೀಲ್ದಾರ್​ಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಡಳಿತದಲ್ಲಿ ಹಣದ ಕೊರತೆಯಿಲ್ಲ. ಸಿಬ್ಬಂದಿ ಕೊರತೆ ಇದ್ದರೂ ಜಿಲ್ಲಾ ಪಂಚಾಯ್ತಿ ಸಿಇಒ ಹಾಗೂ ಜಿಲ್ಲಾಧಿಕಾರಿಗಳಿಗೆ ಪ್ರತಿ ಗ್ರಾಪಂಗೆ ತೆರಳಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಪ್ರತಿ ತಹಸೀಲ್ದಾರ್​ ಕಚೇರಿಗೆ 45 ರಿಂದ 50 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಬರ ಕಾಮಗಾರಿ ನಿರ್ವಹಣೆಯಲ್ಲಿ ಎಲ್ಲಿಯೂ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾಧಿಕಾರಿ ಡಾ. ಆರ್​. ವಿಶಾಲ್, ಜಿಲ್ಲಾ ಪಂಚಾಯ್ತಿ ಸಿಇಒ ಕೆ.ವಿ. ರಾಜೇಂದ್ರ ಉಪಸ್ಥಿತರಿದ್ದರು.

One Reply to “ರಾಜ್ಯದಲ್ಲಿ 2,999 ಗ್ರಾಮಗಳಿಗೆ ಟ್ಯಾಂಕರ್ ಕುಡಿವ ನೀರು ಸರಬರಾಜು ಇತಿಹಾಸದಲ್ಲೇ ಮೊದಲು ಎಂದ ಸಚಿವ”

  1. ಸಾಹೇಬರೇ, ಬರೀ ಇವಾಗಿಂದ ನೋಡುವುದು ಅಲ್ಲ. ಮಳೆ ನೀರು ಕೊಯ್ಲು, ನೀರು ಸಂಗ್ರಹಣೆ ಅದಕ್ಕೆ ಆದ್ಯತೆ ನೀಡಿ ಭವಿಷ್ಯದಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಿ. ಜಲಾಶಯದ ಹೂಳನ್ನು ಬೇಸಿಗೆಯಲ್ಲಿ ತೆಗೆದು, ನೀರು ಪೋಲಾಗದಂತೆ ಕ್ರಮ ಕೈಗೊಳ್ಳಿ

Leave a Reply

Your email address will not be published. Required fields are marked *