ನಾಣ್ಯ ಹಾಕಿದ್ರೂ ಬರುತ್ತಿಲ್ಲ ಕುಡಿಯುವ ನೀರು!

<<ಸ್ಥಗಿತಗೊಂಡಿದೆ ಬ್ರಹ್ಮಾವರ ಬಂಟರ ಭವನ ಬಳಿಯ ಘಟಕ * ವಾರಂಬಳ್ಳಿ ಪಂಚಾಯಿತಿ ನಿರ್ಲಕ್ಷೃ>>

ಬಂಡೀಮಠ ಶಿವರಾಮ ಆಚಾರ್ಯ, ಬ್ರಹ್ಮಾವರ
ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ನಗರ ಮಧ್ಯಭಾಗದಲ್ಲಿರುವ ಬಂಟರ ಭವನ ಬಳಿ ದಾನಿಗಳು ಮತ್ತು ಸಂಘ ಸಂಸ್ಥೆ ನೆರವಿನಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕೆಲವು ತಿಂಗಳಿಂದ ನೀರು ಸ್ಥಗಿತಗೊಂಡಿದೆ.
ಉತ್ತಮ ಜಲ ಸಂಪತ್ತು ಹೊಂದಿದ್ದ ಸರ್ಕಾರಿ ಬೋರ್‌ವೆಲ್‌ನಿಂದ ಪೈಪ್ ಮೂಲಕ ನೀರು ತಂದು ಶುದ್ಧೀಕರಿಸುವ ನೀರಿನ ಘಟಕವನ್ನು ರಾಜ್ಯದಲ್ಲೇ 2ನೇದಾಗಿ ನಾಲ್ಕು ವರ್ಷದ ಹಿಂದೆ ಸ್ಥಾಪಿಸಲಾಗಿತ್ತು. ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಜಿಲ್ಲಾ ಪಂಚಾಯತಿ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ ಹಾಗೂ ಹಂಗಾರಕಟ್ಟೆ ರೋಟರಿ ನೆರವಿನಿಂದ ನಿರ್ಮಾಣಗೊಂಡ ಶುದ್ಧ ನೀರಿನ ಘಟಕ ವಾರಂಬಳ್ಳಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿತ್ತು.

2 ರೂ.ಗೆ 1 ಲೀಟರ್ ನೀರು:  ಆರಂಭದಲ್ಲಿ ಎರಡು ರೂ. ನಾಣ್ಯ ಹಾಕಿದರೆ ಒಂದು ಲೀಟರ್ ಮತ್ತು 5 ರೂ. ನಾಣ್ಯಕ್ಕೆ 5 ಲೀಟರ್ ನೀರು ಬರುವ ಘಟಕದಿಂದ ಸ್ಥಳೀಯರು, ಪ್ರಯಾಣಿಕರು ಹಾಗೂ ಪ್ರವಾಸಿಗರು ಉಪಯೋಗ ಪಡೆಯುತ್ತಿದ್ದರು. ಬಳಿಕ ಒಂದು ಬಾರಿ ತಾಂತ್ರಿಕ ದೋಷ ಕಂಡುಬಂದಾಗ ಸರಿಪಡಿಸಲಾಗಿತ್ತು. ಗ್ರಾಮ ಪಂಚಾಯಿತಿ ಉಚಿತವಾಗಿ ನೀರು ಸರಬರಾಜು, ಸಮಯದ ಮಿತಿ, ಸಿಸಿ ಕ್ಯಾಮರಾ ಕಣ್ಗಾವಲು ಇದೆ ಎಂದು ನಾಮಫಲಕ ಹಾಕಿ ಕೆಲ ಸಮಯ ಚಾಲನೆಯಲ್ಲಿತ್ತು.

ಗಮನ ಹರಿಸದ ಗ್ರಾಪಂ:  ನೀರು ಶುದ್ಧೀಕರಣ ಯಂತ್ರ ಎರಡನೇ ಬಾರಿ ಹಾಳಾಗಿ ವರ್ಷ ಕಳೆಯುತ್ತ ಬಂದರೂ ಗ್ರಾಪಂ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಒಳಗಡೆ ಇರುವ ಸ್ಟೀಲ್ ಬ್ಯಾರಲ್ ಮತ್ತು ಶುದ್ಧೀಕರಿಸುವ ಯಂತ್ರಗಳು ತುಕ್ಕು ಹಿಡಿಯುವಂತಿದೆ. ನೀರಿಗೆ ಹೆಚ್ಚಿನ ಬೇಡಿಕೆಯಿರುವ ಸಮಯದಲ್ಲೇ ಘಟಕ ಸ್ಥಗಿತಗೊಂಡಿದ್ದು, ಇದನ್ನು ಸರಿಪಡಿಸಿ ನೀರು ಪೂರೈಸಬೇಕೆಂಬುದು ಜನರ ಆಗ್ರಹ.

ಒಮ್ಮೆ ಡಾ.ಜಿ.ಶಂಕರ ಅವರ ಬಳಿ ಹೇಳಿದ ಪರಿಣಾಮ 40 ಸಾವಿರ ರೂ. ಖರ್ಚು ಮಾಡಿ ಸರಿಪಡಿಸಿದ್ದರು. ಮತ್ತೊಮ್ಮೆ ಹಾಳಾದ ಅನಂತರ ಇಲ್ಲಿನ ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಗಮನಕ್ಕೆ ತಂದರೂ ಯಾವುದೆ ಪ್ರತಿಕ್ರಿಯೆ ಸಿಕ್ಕಿಲ್ಲ. ಕುಡಿಯುವ ನೀರಿಗೆ ತತ್ವಾರ ಇರುವ ಈ ಸಮಯದಲ್ಲಿ ಇದನ್ನು ಕೂಡಲೆ ಸರಿಪಡಿಸಬೇಕು.
ರತ್ನಾಕರ, ಮೋಗವೀರ ಯುವ ಸಂಘಟನೆ ಉಪಾಧ್ಯಕ್ಷ ಬ್ರಹ್ಮಾವರ ಘಟಕ