ಬತ್ತಿದ ಬೆನಗಲ್ ಬಾಳ್ಕಟ್ಟು ಹೊಳೆ

ಅನಂತ ನಾಯಕ್ ಕೊಕ್ಕರ್ಣೆ
ತರಕಾರಿಗಳ ಗ್ರಾಮ ಬೆನಗಲ್, ಮೊಗವೀರಪೇಟೆ ಸುತ್ತಮುತ್ತಲಿನ ರೈತರು ಬಾಳ್ಕಟ್ಟು ಹೊಳೆ ನೀರು ನಂಬಿ ತರಕಾರಿ ಬೆಳೆಯುತ್ತಿದ್ದರು. ಈ ವರ್ಷದ ಸೂರ್ಯನ ತೀವ್ರ ತೀಕ್ಷ್ಣ ಕಿರಣಗಳಿಂದ ನೀರಿನ ಒಡಲಾಳ ಬತ್ತಿದೆ. ಹೊಳೆಯಲ್ಲಿ ಹೂಳು ತುಂಬಿದ್ದು ಈ ಬಾರಿ ನೀರು ಶೇಖರಣೆಯಾಗದೆ ಇರಲು ಕಾರಣ.
ನೀಲಾವರ ಕಿಂಡಿ ಅಣೆಕಟ್ಟಿಗೆ ಹಲಗೆಗಳನ್ನು ಜೋಡಿಸಿದ್ದು, ಅದು ಅಸಮರ್ಪಕವಾಗಿರುವುದರಿಂದ ನೀರು ಪೋಲಾಗುತ್ತಿದೆ ಎಂಬುದು ರೈತರ ಆಕ್ಷೇಪ. ಈ ಭಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಹೈನುಗಾರರು, ಕೃಷಿಕರು ಇರುವುದರಿಂದ ಜಲಮೂಲಗಳಾದ ಹೊಳೆ, ಬಾವಿ, ಕೆರೆಗಳನ್ನು ನಂಬಿದ್ದಾರೆ. ಆದರೆ ಮುಂಗಾರು ಬೇಗನೆ ಕೈಕೊಟ್ಟಿದ್ದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದೇ ರೀತಿ ಹವಾಮಾನ ಮುಂದುವರಿದರೆ ತೀವ್ರ ತೆರನಾದ ಬರಗಾಲ ಎದುರಾಗಬಹುದು ಎನ್ನುತ್ತಾರೆ ಜನರು.

ಜಾನುವಾರು ಮಾರಾಟಕ್ಕೆ ನಿರ್ಧಾರ: ಗ್ರಾಮೀಣ ಭಾಗದಲ್ಲಿ ಆರ್ಥಿಕತೆಯ ಮೂಲವಾದ ಹೈನುಗಾರಿಕೆ ಅವಲಂಬಿಸಿದ ಹೈನುಗಾರರು ಇಂದು ಜಾನುವಾರುಗಳಿಗೆ ಅಧಿಕ ನೀರು ನೀಡಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ನೀರಿನ ಅಭಾವದಿಂದಾಗಿ ಅವುಗಳ ಸಂಕಷ್ಟ ನೋಡಲಾಗದೆ ನೀರಿರುವ ಕಡೆ ಮಾರಾಟ ಮಾಡಲು ಕೆಲವರು ನಿರ್ಧರಿಸಿದ್ದಾರೆ.

ಹೊಳೆಯ ಪಕ್ಕದಲ್ಲೇ 15 ವರ್ಷದ ಹಿಂದೆ ಬಾವಿ ನಿರ್ಮಿಸಿದ್ದು, ಇಲ್ಲಿಯ ತನಕ ಅದರಲ್ಲಿ ನೀರು ಬತ್ತಿರಲಿಲ್ಲ. ಆದರೆ ಈ ಬಾರಿ ಫೆಬ್ರವರಿಯಲ್ಲೇ ನೀರು ಇಂಗಿದೆ. ದನಕರುಗಳಿಗೆ ನೀಡಲು ಮೇವಿನ ಇಳುವರಿಯೂ ಇಳಿಮುಖವಾಗಿದೆ. ಅಗತ್ಯಕ್ಕಿಂತ ಹೆಚ್ಚಾಗಿ ತೋಟಗಳಿಗೆ ಪಂಪ್‌ಸೆಟ್‌ಗಳ ಮೂಲಕ ನೀರು ಹಾಯಿಸಿರುವುದು ಕೂಡ ನೀರಿನ ಅಭಾವ ಉಂಟಾಗಲು ಕಾರಣ. ಪ್ರತಿ ಗ್ರಾಮದಲ್ಲೂ ಹೊಳೆ, ಮದಗ, ಬಾವಿ, ಕೆರೆಗಳ ಹೂಳೆತ್ತುವಿಕೆ ನಡೆಸಬೇಕು. ನೀರಿನ ಅಭಾವದಿಂದ ಜಾನುವಾರುಗಳನ್ನು ಮಾರಾಟ ಮಾಡಲು ಹೈನುಗಾರರು ನಿರ್ಧರಿಸಿದ್ದಾರೆ. ದನಕರುಗಳಲ್ಲಿ ರೋಗಗಳ ಭೀತಿ ಉಂಟಾಗಿದೆ.
ರಘುವೀರ ಕಿಣಿ ಮೊಗವೀರಪೇಟೆ ಪ್ರಗತಿಪರ ಕೃಷಿಕರು