ಒಣಗುತ್ತಿವೆ ಕಾಳುಮೆಣಸು ಬಳ್ಳಿಗಳು

  • ಗೋಣಿಕೊಪ್ಪಲು: ತೇವಾಂಶ ಕೊರತೆ, ಕೀಟಬಾಧೆ, ಗೆದ್ದಲು ಮತ್ತು ನೇರವಾಗಿ ಬೀಳುವ ಸೂರ್ಯನ ಕಿರಣಗಳಿಂದ ಬಹುತೇಕ ತೋಟಗಳಲ್ಲಿ ಕಾಳುಮೆಣಸು ಬಳ್ಳಿಗಳು ಹಳದಿ ರೂಪ ಪಡೆದು, ನಿತ್ರಾಣಗೊಂಡು ಸಾಯುತ್ತಿವೆ.
  • ಕಳೆದ ಸೆಪ್ಟೆಂಬರ್ ನಂತರ ಮಳೆ ಇಲ್ಲದಿರುವುದು ತೇವಾಂಶ ಕೊರತೆಗೆ ಕಾರಣವಾಗಿದೆ. ಬಳ್ಳಿಗಳ ಬುಡಕ್ಕೆ ನೀರು ನೀಡುವ ಅವಶ್ಯಕತೆ ಹೆಚ್ಚಿದ್ದರೂ ಕೆರೆಗಳಲ್ಲಿ ನೀರಿನ ಪ್ರಮಾಣ ಕುಸಿದಿರುವುದರಿಂದ ಆ ಕೆಲಸ ಸಾಧ್ಯವಾಗುತ್ತಿಲ್ಲ.
  • ಈ ನಡುವೆಯೂ ಕಾಳುಮೆಣಸು ಬಳ್ಳಿಗಳನ್ನು ರಕ್ಷಿಸಿಕೊಳ್ಳಲು ಕೃಷಿಕರು ಹಲವು ಪ್ರಯೋಗಗಳಿಗೆ ಮುಂದಾಗಬೇಕು ಎಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ.
  • ಸಲಹೆಗಳು: ವಾರಕ್ಕೊಮ್ಮೆ ಪ್ರತಿ ಬಳ್ಳಿಗೆ 40 ರಿಂದ 50 ಲೀಟರ್‌ನಷ್ಟು ನೀರು ಕೊಡಬೇಕು. ಕಾಳುಮೆಣಸು ಸ್ಪೆಷಲ್ ಸಿಂಪಡಣೆ ಮಾಡುವುದರಿಂದ ಗುಣಮಟ್ಟದ ಫಸಲು ಹಾಗೂ ಶೇ.20 ರಷ್ಟು ಅಧಿಕ ಇಳುವರಿ ಪಡೆಯಲು ಸಾಧ್ಯ. ಅದರಂತೆ, ಒಂದು ಕೆ.ಜಿ. ಕಾಳುಮೆಣಸು ಸ್ಪೆಷಲ್ ಪೋಷಕಾಂಶದ ಮಿಶ್ರಣವನ್ನು 200 ಲೀ. (ಒಂದು ಬ್ಯಾರಲ್) ನೀರಿನಲ್ಲಿ ಚೆನ್ನಾಗಿ ಕರಗಿಸಿಕೊಂಡು ಎಲೆಗಳು ಮತ್ತು ಕಾಂಡ ಚೆನ್ನಾಗಿ ನೆನೆಯುವಂತೆ ಸಿಂಪಡಣೆ ಮಾಡಬೇಕು. ತೋಟಗಳ ಅಂಚಿನಲ್ಲಿ ಬೆಳೆದಿರುವ ಬಳ್ಳಿಗಳ ಮೇಲೆ 3 ಕೆ.ಜಿ. ಕೆಯೋಲಿನ್ ಅನ್ನು ಒಂದು ಬ್ಯಾರಲ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ಸೂರ್ಯನ ಕಿರಣಗಳಿಂದ ರಕ್ಷಿಸಬಹುದು. ರೋಗಬಾಧೆಯಿಂದ ಬಳಲಿ ಸತ್ತು ಹೋದ ಬಳ್ಳಿಗಳನ್ನು ಬೇರು ಸಮೇತ ಕಿತ್ತು ತೋಟದಿಂದ ಹೊರಗೆ ನಾಶಪಡಿಸಬೇಕು. ತೋಟಗಳಲ್ಲಿ ಕನಿಷ್ಠ ಶೇ.20 ರಿಂದ 25 ರಷ್ಟು ನೆರಳಿರುವಂತೆ ನೋಡಿಕೊಳ್ಳಬೇಕು. ಬಳ್ಳಿಯ ಸುತ್ತಲು ಹಸಿರುಎಲೆ, ಒಣಎಲೆ ಅಥವಾ ಸಾವಯವ ಪದಾರ್ಥಗಳನ್ನು ಹಾಕಿ ಮುಚ್ಚಬೇಕು.
  • ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತಿರುವ ಎಲೆಗಳಲ್ಲಿ ಸಣ್ಣ ಶಲ್ಕಕೀಟ (ರಸ ಹೀರುವ ಕೀಟ) ಕಂಡುಬಂದರೆ, ಅವುಗಳ ಹತೋಟಿಗೆ 2.0 ಮೀ.ಲೀ. ಡೈಮಿಥೋಯೇಟ್ (ರೋಗರ್) ಅಥವಾ ಇಮೀಡಕ್ಲೋಪ್ರೀಡ್ 0.3 ಮಿ.ಲೀ. ಕೀಟನಾಶಕವನ್ನು ಪ್ರತಿ ಲೀ. ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ನರ್ಸರಿಯಲ್ಲಿ ಪ್ರತಿ ಲೀ. ನೀರಿಗೆ 3.0 ಮೀ.ಲಿ. ಬೇವಿನಎಣ್ಣೆ ಮಿಶ್ರಣ ಮಾಡಿ ಸಿಂಪಡಣೆ ಮಾಡುವುದರಿಂದ ಈ ಕೀಟಗಳನ್ನು ನಿಯಂತ್ರಿಸಬಹುದು.
  • ಗೆದ್ದಲಿನ ಬಾಧೆ ಹತೋಟಿಗೆ ಪ್ರತಿ ಲೀ. ನೀರಿಗೆ 2.0 ಮಿ.ಲಿ. ಕ್ಲೋರೋಪೈರಿಫಾಸ್ ಕೀಟನಾಶಕ ಬೆರೆಸಿ ಸಿಲ್ವರ್ ಮರದ ಕಾಂಡಕ್ಕೆ ತಗಲುವಂತೆ ಸಿಂಪಡಿಸಬೇಕು ಮತ್ತು ಬುಡಕ್ಕೆ ಸುರಿಯಬೇಕು. ತೋಟದಲ್ಲಿರುವ ಗೆದ್ದಲಿನ ಹುತ್ತಕ್ಕೆ ಈ ಕೀಟನಾಶಕವನ್ನು ಸುರಿದರೆ ಗೆದ್ದಲನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಫೋಟೋ26ಜಿಕೆಎಲ್ 01- ಹಳದಿ ಬಣ್ಣಕ್ಕೆ ತಿರುಗಿ ಸಾಯುವ ಹಂತದಲ್ಲಿರುವ ಬಳ್ಳಿಗಳು.