ಅಳಿವೆಬಾಗಿಲಿನಲ್ಲಿ ಶಾಶ್ವತ ಡ್ರೆಜ್ಜಿಂಗ್

 ಹರೀಶ್ ಮೋಟುಕಾನ ಮಂಗಳೂರು
ವಾಣಿಜ್ಯ ವ್ಯವಹಾರದ ಹಡಗುಗಳಿಗೆ ಹಾಗೂ ಮೀನುಗಾರಿಕಾ ದೋಣಿಗಳ ಅವಘಡದ ಸ್ಥಳವಾಗಿರುವ ಅಳಿವೆ ಬಾಗಿಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 29 ಕೋಟಿ ರೂ.ಗಳ ಮಹತ್ವದ ಯೋಜನೆ ರೂಪಿಸಲಾಗಿದೆ. ಈ ವರ್ಷಾಂತ್ಯಕ್ಕೆ ಕಾಮಗಾರಿ ಆರಂಭ ಗೊಳ್ಳುವ ನಿರೀಕ್ಷೆ ಇದೆ.
ನೇತ್ರಾವತಿ ಹಾಗೂ ಗುರುಪುರ ನದಿ ಸಂಗಮಿಸಿ ಸಮುದ್ರ ಸೇರುವಲ್ಲಿ ತುಂಬಿರುವ ಹೂಳನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸಿ ಲಕ್ಷದ್ವೀಪಕ್ಕೆ ಮಿನಿ ಹಡಗುಗಳು ಮತ್ತು ಮೀನುಗಾರಿಕಾ ದೋಣಿಗಳು ಆತಂಕವಿಲ್ಲದೆ ಸಂಚರಿಸಲು ಸಾಧ್ಯವಾಗಲಿದೆ.

ಪರಿಸರ ಇಲಾಖೆಯಿಂದ ಮತ್ತು ಸಿಆರ್‌ಝೆಡ್ ಅನುಮತಿ ಇನ್ನಷ್ಟೇ ಸಿಗಬೇಕಾಗಿದೆ. ಸಿಆರ್‌ಝೆಡ್ ಅನುಮತಿ ಬಗ್ಗೆ ಜುಲೈ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಚರ್ಚೆಯಾಗಲಿದೆ. ಬಳಿಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ಸಂಬಂಧ ಸಾರ್ವಜನಿಕ ಅಹವಾಲು ಸ್ವೀಕರಿಸಲಿದೆ. ಇಲ್ಲಿ ದಾಖಲಾದ ವರದಿಯನ್ನು ಪರಿಸರ ಮಂಡಳಿ ಅನುಮತಿಗೆ ನೀಡುತ್ತಾರೆ. ಅಂತಿಮವಾಗಿ ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿ ಪರಿಶೀಲಿಸಿ ಅನುಮತಿ ನೀಡಲಿದೆ. ಈ ಪ್ರಕ್ರಿಯೆ ನಡೆಯಲು ನಾಲ್ಕೈದು ತಿಂಗಳ ಕಾಲಾವಕಾಶ ಬೇಕು.

ಕೇಂದ್ರ-ರಾಜ್ಯ ಸಹಭಾಗಿತ್ವ: ಮಂಗಳೂರಿನ ಬಂದರು ಇಲಾಖೆ ಕೈಗೊಂಡ ಮಹತ್ವದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿ, ಕೇಂದ್ರಕ್ಕೆ ಕಳುಹಿಸಿತ್ತು. ಕಳೆದ ವರ್ಷ ಕೇಂದ್ರ ಸರ್ಕಾರ ಇದಕ್ಕೆ ಹಸಿರು ನಿಶಾನೆ ತೋರಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಈ ಯೋಜನೆ ಸಾಕಾರಗೊಳ್ಳಲಿದೆ. ಕೇಂದ್ರ ಸರ್ಕಾರದಿಂದ 14.5 ಕೋಟಿ ರೂ. ಹಾಗೂ ಇಷ್ಟೇ ಪ್ರಮಾಣದ ಹಣವನ್ನು ರಾಜ್ಯ ಸರ್ಕಾರ ನೀಡಲಿದೆ. ‘ಕೋಸ್ಟಲ್ ಬರ್ತ್ ಸ್ಕೀಂ’ನಡಿ ಈ ಯೋಜನೆಗೆ ಒಪ್ಪಿಗೆ ದೊರಕಿದೆ. ಅಳಿವೆಬಾಗಿಲಿನಿಂದ 2ನೇ ಹಂತದ ವಾಣಿಜ್ಯ ದಕ್ಕೆ ಇರುವ 3.2 ಕಿ.ಮೀ.ವ್ಯಾಪ್ತಿಯಲ್ಲಿ ಹೂಳೆತ್ತುವ ಕಾಮಗಾರಿ ನಡೆಯಲಿದೆ. ಹೂಳೆತ್ತಲು ಪ್ರಸ್ತುತ ಮಂಗಳೂರಿನಲ್ಲಿ ಗ್ರ್ಯಾಬ್ ಡ್ರೆಜ್ಜರ್‌ಗಳು ಇದ್ದು, ಮುಂದೆ ಬೃಹತ್ ಪ್ರಮಾಣದ ಕಟ್ಟರ್ ಸಕ್ಷನ್ ಮಾದರಿಯ ಡ್ರೆಜ್ಜಿಂಗ್ ಯಂತ್ರೋಪಕರಣಗಳು ಬರಲಿವೆ.

ಹೂಳು ಅತಿ ಅಪಾಯಕಾರಿ: ಮೀನುಗಾರಿಕಾ ದೋಣಿಗಳ ಸಂಚಾರ ಹಾಗೂ ಲಕ್ಷದ್ವೀಪಕ್ಕೆ ಮಿನಿ ಹಡಗುಗಳ ಸಂಚಾರಕ್ಕೆ ಮಂಗಳೂರು ಬಂದರಿನ ಅಳಿವೆಬಾಗಿಲಿನಲ್ಲಿ ತುಂಬಿರುವ ಬೃಹತ್ ಪ್ರಮಾಣದ ಹೂಳು ಬಹಳಷ್ಟು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಇದರಿಂದಾಗಿ ಇಲ್ಲಿ ಹಲವು ಅವಘಡಗಳು ಸಂಭವಿಸಿದ ಉದಾಹರಣೆಗಳಿವೆ. ಪ್ರತೀ ವರ್ಷ ಅಳಿವೆಬಾಗಿಲು ಪ್ರದೇಶ ದೋಣಿಗಳಿಗೆ ಆತಂಕದ ಜಾಗವಾಗಿ ಪರಿಣಮಿಸಿದೆ. ಎರಡು ವರ್ಷದ ಹಿಂದೆ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಗಿಲ್‌ನೆಟ್ ದೋಣಿಯೊಂದು ಅಳಿವೆ ಬಾಗಿಲು ಸಮೀಪ ಅವಘಡಕ್ಕೀಡಾಗಿದ್ದು, ಇನ್ನೂ ಅದರ ತೆರವು ಕಾರ್ಯಾಚರಣೆ ನಡೆಯದ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯುತ್ತಿರುವ ಮೀನುಗಾರಿಕಾ ದೋಣಿಗಳು ನಿತ್ಯ ಅಪಾಯ ಎದುರಿಸುತ್ತಿದೆ. ಪ್ರತೀ ವರ್ಷವೂ ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿರುವುದರಿಂದ ದೋಣಿಗಳ ಸುಗಮ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ.

2000 ಮೀನುಗಾರಿಕಾ ದೋಣಿಗಳ ಸಂಚಾರ: ಮಂಗಳೂರು ಮೀನುಗಾರಿಕಾ ಬಂದರು ವ್ಯಾಪ್ತಿಯಲ್ಲಿ ಸುಮಾರು 2000 ಮೀನುಗಾರಿಕಾ ದೋಣಿಗಳಿವೆ. 35,875 ಮಂದಿ ನೇರವಾಗಿ ಮತ್ತು 70 ಸಾವಿರಕ್ಕೂ ಅಧಿಕ ಮಂದಿ ಪರೋಕ್ಷವಾಗಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಈ ದೋಣಿಗಳು ಅಳಿವೆಬಾಗಿಲು ಮೂಲಕವೇ ಸಮುದ್ರಕ್ಕೆ ಹೋಗಬೇಕು ಮತ್ತು ಹಿಂತಿರುಗಿ ಬರಬೇಕು. ಸಮುದ್ರ ಪ್ರಕ್ಷುಬ್ಧಗೊಂಡಾಗ ಇಲ್ಲಿ ಸಂಚಾರ ಇನ್ನಷ್ಟು ಅಪಾಯಕಾರಿ.

ಆಳ ಡ್ರೆಜ್ಜಿಂಗ್ ಉದ್ದೇಶ
ಮೀನುಗಾರಿಕಾ ಬೋಟ್‌ಗಳಿಗೆ ಅಳಿವೆಬಾಗಿಲಿನಲ್ಲಿ 3 ಮೀಟರ್ ಆಳಕ್ಕೆ ಡ್ರೆಜ್ಜಿಂಗ್ ಮಾಡಿದರೆ ಸಾಕಾಗುತ್ತದೆ. ಆದರೆ, ಲಕ್ಷದ್ವೀಪಕ್ಕೆ ತೆರಳುವ ವಾಣಿಜ್ಯ ದೋಣಿ, ಮಂಜಿಗಳಿಗೆ 4 ಮೀಟರ್ ಆಳ ಡ್ರೆಜ್ಜಿಂಗ್ ಮಾಡಬೇಕು. ಹೀಗಾಗಿ ಪ್ರತೀ ವರ್ಷ 4 ಮೀಟರ್‌ನಷ್ಟು ಡ್ರೆಜ್ಜಿಂಗ್ ಮಾಡಲಾಗುತ್ತದೆ. ಆದರೆ, ನೀರಿನ ಹರಿಯುವ ವೇಗಕ್ಕೆ ಮರಳು ತುಂಬುವುದರಿಂದ ಪ್ರತೀ ವರ್ಷ ಮೀನುಗಾರಿಕೆ ಹಾಗೂ ವಾಣಿಜ್ಯ ದೋಣಿಗಳ ಸಂಚಾರಕ್ಕೆ ಅಪಾಯ ಆಗುತ್ತಿತ್ತು. ಹೀಗಾಗಿ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಉದ್ದೇಶದಿಂದ 7 ಮೀಟರ್‌ನಷ್ಟು ಆಳದಿಂದ ಹೂಳೆತ್ತುವ ಕಾಮಗಾರಿ ಈ ಮೂಲಕ ನಡೆಯಲಿವೆ.

 ಅಳಿವೆಬಾಗಿಲಿನಲ್ಲಿ ಶಾಶ್ವತ ಡ್ರೆಜ್ಜಿಂಗ್ ಯೋಜನೆಗೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ. ಪರಿಸರ ಅಧ್ಯಯನ ಹಾಗೂ ಸಿಆರ್‌ಝಡ್ ಒಪ್ಪಿಗೆ ಪಡೆದ ನಂತರ, ಜಾಗತಿಕ ಟೆಂಡರ್ ಕರೆದು ಈ ವರ್ಷಾಂತ್ಯದಲ್ಲಿ ಡ್ರೆಜ್ಜಿಂಗ್ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ಇದು 29 ಕೋಟಿ ರೂ.ವೆಚ್ಚದ ಮಹತ್ವದ ಯೋಜನೆ.
ಪ್ರವೀಣ್ ಕುಮಾರ್ ಕಿರಿಯ ಅಭಿಯಂತರರು, ಬಂದರು ಇಲಾಖೆ

Leave a Reply

Your email address will not be published. Required fields are marked *