More

    ಬನವಾಸಿ ಭಾಗದ 86 ಕೆರೆಗಳ ಹೂಳೆತ್ತಿ

    ಶಿರಸಿ: ಬನವಾಸಿ ಭಾಗದ 86 ಕೆರೆಗಳ ಹೂಳೆತ್ತುವ ಕಾಮಗಾರಿಗೆ ಹಿಂದಿನ ಅವಧಿಯಲ್ಲಿಯೇ ಹಣ ಮಂಜೂರಾಗಿದೆ. ನೀತಿ ಸಂಹಿತೆಯ ಕಾರಣ ಕಾಮಗಾರಿ ಆರಂಭಿಸಲಾಗಿರಲಿಲ್ಲ. ಈಗ ಸಣ್ಣ ಕೆರೆಗಳ ಹೂಳೆತ್ತುವ ಕಾಮಗಾರಿಯನ್ನು ತಕ್ಷಣ ಆರಂಭಿಸಿ 15 ದಿನಗಳ ಒಳಗೆ ಪೂರ್ಣಗೊಳಿಸಬೇಕು ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

    ಶನಿವಾರ ನಗರದ ತಾಲೂಕು ಆಡಳಿತ ಸೌಧದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು,ದೊಡ್ಡ ಕೆರೆಗಳ ಹೂಳೆತ್ತುವಿಕೆ ಈಗ ಕೈಗೊಂಡರೆ ಮಳೆಗಾಲದೊಳಗೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಹೀಗೆಂದು ಕಾಮಗಾರಿ ಆರಂಭಿಸದಿದ್ದರೆ ಮುಂದಿನ ಬೇಸಿಗೆಯವರೆಗೂ ಕಾಯಬೇಕಾದ ಸ್ಥಿತಿ ಇದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮದೊಳಗೆ ತಕ್ಷಣ ಸಭೆ ನಡೆಸಿ ಸ್ಥಳೀಯರ ಸಲಹೆ ಪಡೆದು ನಿರ್ಧಾರ ಕೈಗೊಳ್ಳಬೇಕು ಎಂದರು.


    ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದು ಮುಖ್ಯವಲ್ಲ. ಕುಡಿಯುವ ನೀರಿನ ಸಮಸ್ಯೆ, ಮನೆಗಳ ಹಂಚಿಕೆ ಎಷ್ಟು ಪ್ರಮಾಣದಲ್ಲಿದೆ, ಆದ ತೊಂದರೆ ಏನು ಎಂಬುದರ ಮಾಹಿತಿ ನೀಡಬೇಕು ಎಂದರು.


    ಬನವಾಸಿ ಭಾಗದಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿದೆ. ಈ ವೇಳೆ ಬೋರ್ ಹೊಡೆಸಿ ಸಮಯ ಹಾಳು ಮಾಡುವುದು ಬೇಡ. ಎಲ್ಲಿ ನೀರು ಲಭ್ಯ ಇದೆಯೋ ಅಲ್ಲಿಂದ ಪಡೆದು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ.

    ಹಾಸ್ಟೇಲ್ ವಿದ್ಯಾರ್ಥಿಗಳ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ವಿಶೇಷ ಕೌಂಟರ್ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯ ಸರ್ಟಿಫಿಕೇಟ್ ನೀಡಬೇಕು. ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೆ 10 ಕೋಟಿ ರೂ. ಅನುದಾನ ನೀಡಿದ್ದೇನೆ. ಈ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ತಕ್ಷಣ ಆರಂಭ ಆಗಬೇಕು ಎಂದರು.


    ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ, ಬನವಾಸಿ ಭಾಗದಲ್ಲಿ ಈ ವರ್ಷ 13 ಮಿಮೀ ಮಳೆ ಆಗಿದೆ. ಭತ್ತ ಬೆಳೆದವರಿಗೆ ಸಮಸ್ಯೆ ಆಗಿದೆ. ಈಗ 1200 ಟನ್ ಗೊಬ್ಬರ ಬೇಕಾಗುತ್ತಿದೆ. ಜೂನ್ ತಿಂಗಳಿಗೆ ಬೇಕಾಗುವಷ್ಟು ಸ್ಟಾಕ್ ಮಾಡಿಕೊಂಡಿದ್ದೇವೆ. 850 ಟನ್ ಬಿತ್ತನೆ ಬೀಜ ದಾಸ್ತಾನಿದೆ ಎಂದರು.


    ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಹೆಗಡೆ ಮಾಹಿತಿ ನೀಡಿ, ಮೇ 29ರಿಂದ ಶಾಲೆ ಆರಂಭಗೊಳ್ಳಲಿದ್ದು,. ಪುಸ್ತಕ, ಬಟ್ಟೆ ಪೂರೈಕೆ ಆಗಿದೆ. ಬನವಾಸಿ ಭಾಗದಲ್ಲಿ 64 ಶಿಕ್ಷಕರ ಕೊರತೆ ಇದೆ. ಮಕ್ಕಳು ಎಲ್ಲಿ ಜಾಸ್ತಿ ಇದ್ದಾರೆ ಎಂಬುದನ್ನು ಗಮನಿಸಿ ಅತಿಥಿ ಶಿಕ್ಷಕರನ್ನು ನೀಡಲಾಗುವವುದು ಎಂದರು.

    ಉಪವಿಭಾಗಾಧಿಕಾರಿ ದೇವರಾಜ ಆರ್., ತಹಸೀಲ್ದಾರ್ ಸುಮಂತ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ ಸೇರಿ ಹಲವು ಇಲಾಖೆಗಳ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts