ದಶಕಗಳ ಕನಸು ನನಸಿಗೆ ಕಾಲ ಸನ್ನಿಹಿತ

ಅರಸೀಕೆರೆ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಚಿತಾ ಭಸ್ಮವಿರುವ ನಗರದ ಹೊರವಲಯದಲ್ಲಿರುವ ಕಸ್ತೂರ ಬಾ ಸೇವಾಶ್ರಮ ಅಂತಾರ‌್ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಹೊಂದಲಿದೆ ಎನ್ನುವ ಗಾಂಧಿ ಅನುಯಾಯಿಗಳ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಈ ಪುಣ್ಯ ಭೂಮಿಗೆ ಭೇಟಿ ನೀಡಿ, ತಾಣವನ್ನು ಅಭಿವೃದ್ಧಿಗೊಳಿಸುವ ವಾಗ್ದಾನ ನೀಡಿದ್ದರು. ಬಳಿಕ ನುಡಿದಂತೆ ಬಜೆಟ್‌ನಲ್ಲಿ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರು. ಇದೀಗ ಉಪಯುಕ್ತ ಕಟ್ಟಡಗಳ ನಿರ್ಮಾಣ, ಗೇಟ್ ಅಳವಡಿಕೆ, ಕಾಂಕ್ರೀಟ್ ನೆಲಹಾಸು, ಸೇವಾಶ್ರಮದ ನವೀಕರಣ ಸೇರಿದಂತೆ ಆವರಣದಲ್ಲಿರುವ ಪ್ರತಿಮೆಗಳಿಗೆ ಬಣ್ಣಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.
ಮೂರ‌್ನಾಲ್ಕು ವರ್ಷಗಳಿಂದ ಗಾಂಧಿ ಜಯಂತಿಯನ್ನು ಕಸ್ತೂರ ಬಾ ಸೇವಾಶ್ರಮದ ಆವರಣದಲ್ಲಿ ಆಯೋಜಿಸುತ್ತಿರುವುದು ಪ್ರಗತಿಯ ಸಂಕೇತವೆಂದೇ ಭಾವಿಸಲಾಗಿದೆ. ಇಂತಹ ಪುಣ್ಯ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ದಿ.ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಅನಿಲ್ ಶಾಸ್ತ್ರಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಸೇರಿದಂತೆ ಹಲವು ಗಣ್ಯರು, ಮಂತ್ರಿ ಮಹೋದಯರು ಭೇಟಿ ನೀಡಿದ್ದಾರೆ. ಮುಖಂಡರ ಭೇಟಿಯ ಫಲ ಎನ್ನುವಂತೆ ಅಭಿವೃದ್ಧಿ ಕಾರ್ಯಗಳಿಗೂ ವೇಗ ದೊರೆತಿದೆ.

ಹಿನ್ನೆಲೆ: 1945ರಲ್ಲಿ ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅನ್ನು ದೇಶದ ಕೆಲವೆಡೆ ಆರಂಭಿಸಲಾಗಿತ್ತು. ಮಾಜಿ ಸ್ಪೀಕರ್ ದಿವಂಗತ ಯಶೋದರಮ್ಮ ದಾಸಪ್ಪ ಕೂಡ ನಗರದ ಹೊರವಲಯದಲ್ಲಿರುವ ಅರಸೀಕೆರೆ-ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು 85 ಎಕರೆ ವಿಶಾಲ ಪ್ರದೇಶದಲ್ಲಿ ಕಸ್ತೂರ ಬಾ ಟ್ರಸ್ಟ್ ಅನ್ನು ಆರಂಭಿಸಿದ್ದರು. ಅಲ್ಲದೆ, ಗಾಂಧೀಜಿ ಅವರ ಚಿತಾ ಭಸ್ಮವಿರಿಸಿ ಸ್ಮರಣೀಯ ಕಾರ್ಯ ಮಾಡಿದ್ದರು. ಈ ಕ್ಷೇತ್ರದ ಅಭಿವೃದ್ಧಿ ಸವಾಲಾಗಿ ಸ್ವೀಕರಿಸಿರುವ ಪ್ರೊ.ಬಿ.ಶಿವರಾಜ್, ನಿವೃತ್ತ ಐಎಎಸ್ ಅಧಿಕಾರಿ ಶಂಕರಲಿಂಗೇಗೌಡ, ಗಾಂಧಿವಾದಿಗಳಾದ ವುಡೇ ಪಿ.ಕೃಷ್ಣ ಸೇರಿದಂತೆ ಹಲವರು ಇದಕ್ಕೆ ಕೈಜೋಡಿಸಿದ್ದಾರೆ.

ಗಣ್ಯರ ಭೇಟಿಯ ಫಲಶ್ರುತಿ ಹಾಗೂ ಮಾಧ್ಯಮಗಳ ಪ್ರೋತ್ಸಾಹದಿಂದ ಸೇವಾಶ್ರಮ ಅಭಿವೃದ್ಧಿಯತ್ತ ಹೆಜ್ಜೆಯಿಟ್ಟಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಎಲ್ಲರ ನೆರವು, ಸಹಕಾರ ಪಡೆದು ಅಭಿವೃದ್ಧಿ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು.
ಪ್ರೊ.ಜಿ.ಬಿ.ಶಿವರಾಜು ಗೌರವ ಕಾರ್ಯದರ್ಶಿ ಗಾಂಧಿ ಭವನ, ಬೆಂಗಳೂರು

ದೆಹಲಿಯ ರಾಜ್‌ಘಾಟ್ ಮಾದರಿಯಲ್ಲಿ ಪುಣ್ಯಭೂಮಿ ಅಭಿವೃದ್ಧಿಯಾಗಬೇಕು ಎನ್ನುವುದು ತಾಲೂಕಿನ ನಾಗರಿಕರ ಒತ್ತಾಸೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸಿ ಮತ್ತಷ್ಟು ಅಗತ್ಯ ಅನುದಾನ ನೀಡಬೇಕು.
ಕೆ.ಆರ್.ನಿತ್ಯಾನಂದ ವಕೀಲ ಅರಸೀಕೆರೆ