ಐಇಡಿ ಎಕ್ಸ್​ಪರ್ಟ್​ ಸೇರಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಶ್ರೀನಗರ: ಸುಧಾರಿತ ಸ್ಫೋಟಕ ಸಾಧನ (ಐಇಡಿ) ತಯಾರಿಸುವುದರಲ್ಲಿ ನಿಪುಣನಾಗಿದ್ದ ಉಗ್ರ ಸೇರಿದಂತೆ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯ ಕತಾಪುರ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಜೀನತ್​ ಉಲ್​ ಇಸ್ಲಾಂ ಮತ್ತು ಮತ್ತೋರ್ವ ಉಗ್ರನನ್ನು ಹೊಡೆದುರುಳಲಾಗಿದೆ. ಈತ ಈ ಮೊದಲು ಹಿಜ್ಬುಲ್​ ಮುಜಾಹಿದೀನ್​ ಉಗ್ರ ಸಂಘಟನೆಯಲ್ಲಿದ್ದ. ಪ್ರಸ್ತುತ ಆತ ಅಲ್​ ಬದರ್​ ಎಂಬ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದು, ಮೋಸ್ಟ್​ ವಾಂಟೆಡ್​ ಉಗ್ರನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕತಾಪುರ ಪ್ರದೇಶದಲ್ಲಿ ಉಗ್ರರು ಅಡಗಿರುವ ಮಾಹಿತಿಯ ಮೇರೆಗೆ ಶನಿವಾರ ಸಂಜೆ ಶೋಧ ಕಾರ್ಯ ಆರಂಭಿಸಲಾಗಿತ್ತು. ಈ ಸಂದರ್ಭದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಪ್ರಾರಂಭವಾಗಿತ್ತು. ಎನ್​ಕೌಂಟ್​ ನಡೆದ ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *