ಜನಮನ ಸೂರೆಗೊಂಡ ಕುಸ್ತಿ, ತೆರಿಬಂಡಿ ಸ್ಪರ್ಧೆ

ಮುನವಳ್ಳಿ: ಪಟ್ಟಣದಲ್ಲಿ ಶ್ರೀ ಪಂಚಲಿಂಗೇಶ್ವರ ಜಾತ್ರೆ ನಿಮಿತ್ತ ನಡೆದ ವೈವಿಧ್ಯಮಯ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

ಶ್ರೀ ಪಂಚಲಿಂಗೇಶ್ವರನಿಗೆ ನಿತ್ಯ ರುದ್ರಾಭಿಷೇಕ, ವಿಶೇಷ ಪೂಜೆ, ಮಹಾಪ್ರಸಾದ ನಡೆಯಿತು. ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗಾಗಿ ಸಮೂಹ ನೃತ್ಯ ಸ್ಪರ್ಧೆ, ನಿಮಿಷದ ತೆರೆ ಬಂಡಿ ಸ್ಪರ್ಧೆ, ಝೀ ಟಿವಿ ಗಾಯಕರಾದ ಚನ್ನಪ್ಪ ಹುದ್ದಾರ, ವಿಶ್ವಪ್ರಸಾದ ಗಾಣಿಗ, ಅಧಿತಿ, ನಂದಿನಿ, ಸಾಗರ, ದೊಡ್ಡಪ್ಪ ಮಾದರ ಅವರಿಂದ ಸಂಗೀತ ಸ್ವರಾಂಜಲಿ ಕಾರ್ಯಕ್ರಮ, ಮಹಿಳೆಯರಿಗಾಗಿ ಚುಕ್ಕಿ ರಂಗೋಲಿ ಸ್ಪರ್ಧೆ, ಮ್ಯೂಜಿಕಲ್ ಚೇರ್ ಸ್ಪರ್ಧೆ, ಭಕ್ತಿ ಗೀತೆ ಗಾಯನ ಸ್ಪರ್ಧೆ, ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಜಾನುವಾರು ಪ್ರದರ್ಶನ, ಸಾಮಾಜಿಕ ನಾಟಕ, ಜಂಗೀ ನಿಖಾಲಿ ಕುಸ್ತಿ ಪಂದ್ಯಗಳು ಜನರಿಗೆ ಮುದ ನೀಡಿದವು.

ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಅಂಬರೀಷ ಯಲಿಗಾರ ಮಾತನಾಡಿ, ಜಾತ್ರೆಗಳು ನಾಡಿನ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಹಿಡಿದ ಕನ್ನಡಿಯಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಜಾತ್ರೆ ಹಮ್ಮಿಕೊಂಡು ನಾಡಿನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದರು. ಹಮಾಲರ ಸಂಘದಿಂದ ಮಹಾಪ್ರಸಾದ ಸೇವೆ ಜರುಗಿತು. ಮನರಂಜನೆ ಆಟಗಳು, ಜೋಕಾಲಿ ಅಪಾರ ಜನರನ್ನು ಆಕರ್ಷಿಸಿದವು.