ಪರಿಸರ ಜಾಗೃತಿಗೆ ಮೊಳಗಿದ ಕುಂಚ ಕಹಳೆ

« ಕದ್ರಿ ಪಾರ್ಕ್ ಪರಿಸರದಲ್ಲಿ ವಿಶೇಷ ಚಿತ್ರಕಲಾ ಶಿಬಿರ»

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕರಾವಳಿಯ ಧಾರಣಾ ಶಕ್ತಿ ಮೀರಿ ಕೈಗಾರಿಕೆಗಳು ಸ್ಥಾಪನೆಯಾಗಿ ಕೃಷಿ, ನೀರು, ವಾಯು ಮಲಿನವಾಗುತ್ತಿದೆ. ನಗರದ ಕದ್ರಿಪಾರ್ಕ್ ಪರಿಸರದಲ್ಲಿ ಭಾನುವಾರ ‘ಕುಂಚ ಕಹಳೆ’ ವಿಶೇಷ ಚಿತ್ರಕಲಾ ಶಿಬಿರ, ಚಿತ್ರಗಳ ಮೂಲಕ ಈ ಗಂಭೀರ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯಿತು.

ಕರಾವಳಿ ಚಿತ್ರಕಲಾ ಚಾವಡಿ ಮತ್ತು ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಜಂಟಿಯಾಗಿ ಚಿತ್ರಕಲಾ ಶಿಬಿರ ಆಯೋಜಿಸಿತ್ತು. ಕೈಗಾರಿಕೆಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಕುರಿತು ಕಲಾವಿದರು ತಮ್ಮ ಕಲ್ಪನೆಗಳನ್ನು ಕ್ಯಾನ್ವಾಸ್ ಮೇಲೆ ಮೂಡಿಸಿದರು. ಕೈಗಾರಿಕೆಗಳಿಂದ ಭೂಮಿ ಬರಡು, ಆಮ್ಲಜನಕ ಕೊರತೆ, ಜೀವಜಲ ಲಭ್ಯತೆ, ಉಷ್ಣತೆ ಹೆಚ್ಚಳ ಇವುಗಳು ಚಿತ್ರದ ಮೂಲಕ ಹೊರಬಂತು. ಕಲಾವಿದರು ರಚಿಸಿದ ಚಿತ್ರಗಳನ್ನು ವಿವಿಧ ಶಾಲೆ ಕಾಲೇಜುಗಳಿಗೆ ತೆಗೆದುಕೊಂಡು ಹೋಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಸಂಘಟನೆಯದ್ದು.

ಕಲಾವಿದರಾದ ಬಿ.ಗಣೇಶ್ ಸೋಮಯಾಜಿ, ವಿಷ್ಣು ಶೇವಗೂರು, ಮನೋರಂಜಿನಿ, ಭಾಗೀರತಿ ಭಂಡಾರ್ಕರ್, ಸಯ್ಯದ್ ಆಸಿಫ್ ಅಲಿ, ಜಾನ್‌ಚಂದ್ರನ್, ಸಪ್ನಾ ನರೋನ್ಹ, ಸುಧೀರ್ ಕಾವೂರು, ಈರಣ್ಣ ತಿಪ್ಪಣ್ಣನವರ್, ಪೂರ್ಣೇಶ್, ನವೀನ್ ಚಂದ್ರ ಬಂಗೇರ, ಸತೀಶ್ ರಾವ್, ಜಯಶ್ರೀ ಶರ್ಮ, ರಚನಾ ಸೂರಜ್, ನವೀನ್‌ಚಂದ್ರ ಕೋಡಿಕಲ್, ನಿಷಾ ನವೀನ್‌ಚಂದ್ರ ಕಲಾಕೃತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದರು.

ವಿದ್ಯಾರ್ಥಿಗಳಿಗೆ ಸ್ಪರ್ಧೆ: ಪರಿಸರ ಸಂರಕ್ಷಣೆ ವಿಚಾರವಾಗಿ ವಿದಾರ್ಥಿಗಳಿಗೆ ಚಿತ್ರರಚನಾ ಸ್ಪರ್ಧೆ ನಡೆಯಿತು. ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರ ರಕ್ಷಣೆ ವಿಚಾರದಲ್ಲಿ ತಮ್ಮ ಮನಪಟಲದಲ್ಲಿ ಮೂಡಿ ಬಂದ ವಿಚಾರಗಳನ್ನು ಕುಂಚದ ಮೂಲಕ ಡ್ರಾಯಿಂಗ್ ಶೀಟ್‌ಗಳಲ್ಲಿ ಅಭಿವ್ಯಕ್ತ ಪಡಿಸಿದರು.

ಶಿಬಿರ ಉದ್ಘಾಟನೆ: ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್.ಆರ್.ನಾಯ್ಕ ಶಿಬಿರ ಉದ್ಘಾಟಿಸಿ, ದಿನನಿತ್ಯದ ಬದುಕಿನಲ್ಲಿ ಪರಿಸರದ ಬಗ್ಗೆ ಕಾಳಜಿ ಹಾಗೂ ಸಂರಕ್ಷಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಕೈಗಾರಿಕೋದ್ಯಮ, ನಗರೀಕರಣದಿಂದ ಸಾಕಷ್ಟು ಸಮಸ್ಯೆಗಳು ಇಂದು ಕಾಡುತ್ತಿವೆ. ಈ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಶ್ಲಾಘನೀಯ ಎಂದರು. ಕರಾವಳಿ ಚಿತ್ರಕಲಾ ಚಾವಡಿ ಅಧ್ಯಕ್ಷ ಕೋಟಿ ಪ್ರಸಾದ್ ಆಳ್ವ, ಕಾರ‌್ಯದರ್ಶಿ ಅನಂತಪದ್ಮನಾಭ, ಚಿತ್ರಕಲಾವಿದ ಬಿ.ಗಣೇಶ ಸೋಮಯಾಜಿ, ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಕಾರ್ಯಕರ್ತ ಶಬ್ಬೀರ್ ಮೊದಲಾದವರು ಉಪಸ್ಥಿತರಿದ್ದರು. ಡಾ.ಶಿವಪ್ರಕಾಶ್ ಪರಿಸರ ಮತ್ತು ಮಾನವ ಕುರಿತು ಚುಟುಕು ಹಾಗೂ ಪ್ರತಾಪ್ ಚೇ ಪರಿಸರ ಜಾಗೃತಿ ಹಾಡುಗಳನ್ನು ಪ್ರಸ್ತುತಪಡಿಸಿದರು.

ಮುಖ್ಯಮಂತ್ರಿಗೆ ಮನವಿ: ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿದ ಕಲಾವಿದರು, ಸಾರ್ವಜನಿಕರಿಂದ ಸಹಿ ಪಡೆದು ಅದನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಸಲ್ಲಿಸಲು ಉದ್ದೇಶಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಿದವರು ಹೆಬ್ಬೆರಳಿಗೆ ಬಣ್ಣ ಹಚ್ಚಿ ಅದನ್ನು ಕ್ಯಾನ್ವಾಸ್‌ಗೆ ಮೂಡಿಸುವ ಮೂಲಕ ವಿಶೇಷ ಕಲಾಕೃತಿ ಸೃಷ್ಟಿಸಲಾಯಿತು. ಭೋಪಾಲ್ ಅನಿಲ ದುರಂತ ವಿರುದ್ಧ ಹೋರಾಟ ಮಾಡುತ್ತಿರುವ ಸತ್ಯನಾಥ್ ಸಾರಂಗಿ ಡಿ.21ರಂದು ಸಾಯಂಕಾಲ 3.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ನಡೆಸಲಿದ್ದಾರೆ ಎಂದು ಕುಂಚ ಕಹಳೆ ಸಂಘಟಕ ಶಬ್ಬೀರ್ ಮಾಹಿತಿ ನೀಡಿದರು.

ಕರಾವಳಿಯ ಧಾರಣಾ ಶಕ್ತಿ ಮೀರಿ ಕೈಗಾರಿಕೆಗಳು ಸ್ಥಾಪನೆಯಾಗಿ ಇಲ್ಲಿನ ಕೃಷಿ, ನೀರು, ವಾಯ್ಯಮಾಲಿನ್ಯತೆಯಿಂದಾಗಿ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿವೆ. ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಸೂಚ್ಯಂಕದಂತೆ ಮಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶ ಶೇ.70ರಷ್ಟು ಮಾಲಿನ್ಯವಾಗಿದೆ. ಭೋಪಾಲ್ ಅನಿಲ ದುರಂತ ಸಂಭವಿಸಿ 34 ವರ್ಷಗಳು ತುಂಬುತ್ತಿದೆ ಇಂತಹ ಘಟನೆಗಳು ಜಿಲ್ಲೆಯಲ್ಲಿ ನಡೆಯಬಾರದು ಎನ್ನುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ.

– ಟಿ.ಆರ್.ಭಟ್, ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಸಂಚಾಲಕ