ಕುಶಾಲನಗರ: ವಿಜ್ಞಾನ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಲೋಕ ಶಿಕ್ಷಣದ ಸಂದೇಶವನ್ನು ಸಮಾಜಕ್ಕೆ ರವಾನಿಸುವ ಪ್ರಭಾವಿ ಮಾಧ್ಯಮವಾಗಿ ನಾಟಕಕಲೆ ಮಹತ್ವ ಪಡೆದುಕೊಂಡಿದೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಚಂದ್ರಕಾಂತ್ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಾನವಕುಲದ ಪ್ರಯೋಜನಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ಕೇಂದ್ರ ವಿಷಯದಡಿ ಬುಧವಾರ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಮೈಸೂರು ವಿಭಾಗಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ಇಂಥ ಸ್ಪರ್ಧೆಗಳನ್ನು ಏರ್ಪಡಿಸ ಲಾಗಿದೆ. ಕಲೆ ಮತ್ತು ವಿಜ್ಞಾನದ ನಡುವೆ ನಿಕಟವಾದ ಸಂಬಂಧವಿದ್ದು, ವಿಜ್ಞಾನ ನಾಟಕ ಸ್ಪರ್ಧೆ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಪ್ರಭೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಾಟಕ ಸ್ಪರ್ಧೆಯ ನೋಡಲ್ ಅಧಿಕಾರಿ ಕೆ.ಜಿ.ನೀಲಕಂಠಪ್ಪ, ಮಾನವಕುಲದ ಪ್ರಯೋಜನಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ಕೇಂದ್ರ ವಿಷಯದಡಿ ಐದು ಉಪ ವಿಷಯಗಳಿಗೆ ನಾಟಕ ಸ್ಪರ್ಧೆ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ, ಜ್ಞಾನ ಹೆಚ್ಚಿಸಲು ಸರ್ಕಾರ ವಿಜ್ಞಾನ ನಾಟಕ ಸ್ಪರ್ಧೆ ಆಯೋಜಿಸಿದೆ ಎಂದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಇಂತಹ ಸ್ಪರ್ಧೆಗಳು ವಿದ್ಯಾರ್ಥಿ ಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಡಯಟ್ ಸಂಸ್ಥೆಯ ಪೂರ್ವ ಸೇವಾ ತರಬೇತಿ ವಿಭಾಗದ ಮುಖ್ಯಸ್ಥ ಎಂ.ಕೃಷ್ಣಪ್ಪ, ಉಪನ್ಯಾಸಕ ವಿ.ವಿಜಯ್, ಕೆ.ಎಸ್.ನಳಿನಾಕ್ಷಿ, ಲತಾ, ಗಾಯಿತ್ರಿ, ಗೀತಾ ಇದ್ದರು. ತೀರ್ಪುಗಾರರರಾಗಿ ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಎಚ್.ಎನ್.ಭಾರತಿ ಹಾಗೂ ಮಡಿಕೇರಿ ಸರ್ಕಾರಿ ಜೂನಿಯರ್‌ಕಾಲೇಜಿನ ನಾಟಕ ಶಿಕ್ಷಕ ಪ್ರವೀಣ್ ಪಾಲ್ಗೊಂಡಿದ್ದರು.
ನಾಟಕ ಪ್ರದರ್ಶನ: ಸಿರಿಧಾನ್ಯಗಳು, ಆಹಾರ ಭದ್ರತೆ, ನಿತ್ಯ ಜೀವನದಲ್ಲಿ ಆಧುನಿಕ ತಂತ್ರಜ್ಞಾನ, ಆರೋಗ್ಯ ರಕ್ಷಣೆಯಲ್ಲಿ ಪ್ರಸ್ತುತ ಪ್ರಗತಿಗಳು, ಸಮಾಜದಲ್ಲಿನ ಮೂಢನಂಬಿಕೆ ಎಂಬ ವಿಷಯಗಳ ಕುರಿತು ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ಕೊಡಗು ಸೇರಿದಂತೆ ರಾಮನಗರ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಂದ ತಲಾ ಒಂದೊಂದು ತಂಡ ಭಾಗವಹಿಸಿತ್ತು. ಮಕ್ಕಳ ನಾಟಕ ಸ್ಪರ್ಧೆ ಗಮನ ಸೆಳೆಯಿತು.