ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ರಂಗಭೂಮಿ ಜಾನಪದ, ವೃತ್ತಿ ಹಾಗೂ ವಿಲಾಸಿ ರಂಗಭೂಮಿಗಳಾಗಿ ಟಿಸಿಲೊಡೆದು ಬೆಳೆದು ಬಂದಿದ್ದನ್ನು ಕಾಣುತ್ತೇವೆ ಎಂದು ಹಿರಿಯ ರಂಗಕರ್ಮಿ ಬಸವರಾಜ ಬೆಂಗೇರಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ನಿಮಿತ್ತ ಗುರುವಾರ ಆಯೋಜಿಸಿದ್ದ ನಾಟಕ ಪ್ರದರ್ಶನದಲ್ಲಿ ಕನ್ನಡ ರಂಗಭೂಮಿ ಕಲಾವಿದರು ಕುರಿತು ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ವರ್ಷಕ್ಕೊಮ್ಮೆ ಗ್ರಾಮದೇವತೆ ಜಾತ್ರೆ ಸಮಯದಲ್ಲಿ ಗ್ರಾಮದ ಎಲ್ಲ ಕಲಾವಿದರು ಸೇರಿ ನಾಟಕ ಆಡುತ್ತಿದ್ದರು. ಇದನ್ನೇ ಜಾನಪದ ರಂಗಭೂಮಿ ಎಂದು ಕರೆದರೆ, ರಂಗಭೂಮಿಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಾ ಬಂದ ಅನೇಕ ಕಲಾವಿದರು ಕಂಪನಿಗಳನ್ನು ಕಟ್ಟಿಕೊಂಡು ನಾಟಕ ಪ್ರದರ್ಶನ ಮಾಡುತ್ತಾ ಬಂದಿದ್ದನ್ನು ಕಾಣುತ್ತೇವೆ. ಅನೇಕ ಸಾಹಿತಿಗಳು ಈ ರಂಗಭೂಮಿಗಾಗಿ ಸಾಹಿತ್ಯ ರಚಿಸಿಕೊಟ್ಟಿರುವುದು ಗಮನಾರ್ಹ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಾಡಪ್ಪಿ ಮಾತನಾಡಿ, ವೃತ್ತಿರಂಗಭೂಮಿ ಜತೆಯಲ್ಲಿ ಜನ್ಮತಾಳಿದ ಹವ್ಯಾಸಿ ರಂಗಭೂಮಿ ಮರಾಠಿಗರ ಪ್ರಭಾವದಿಂದ ಬೆಳಕು ಕಂಡದ್ದಲ್ಲ. ನಮ್ಮಲ್ಲಿಯ ಸಣ್ಣಾಟ, ದೊಡ್ಡಾಟ, ಬಯಲಾಟ, ಯಕ್ಷಗಾನ ಬಳಸಿಕೊಂಡು ಮರಾಠಿ ರಂಗಭೂಮಿ ಬೆಳೆದು ಕರ್ನಾಟಕಕ್ಕೆ ಬಂದಿತು. ಶ್ರೀರಂಗರು, ಕಾರಂತರು, ಟಿ.ಪಿ. ಕೈಲಾಸಂ ಅವರು ಹವ್ಯಾಸಿ ರಂಗಭೂಮಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು ಎಂದರು.
ಚಂದ್ರಕಾಂತ ಬೆಲ್ಲದ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಸಿ.ಎಸ್. ಪಾಟೀಲಕುಲಕರ್ಣಿ, ಸದಾಶಿವ ಜನಗೌಡರ, ಬಿ.ಜಿ. ಬಾರ್ಕಿ, ಎಸ್.ಎಂ. ದಾನಪ್ಪಗೌಡರ, ಇತರರು ಇದ್ದರು.
ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.
ಬಳಿಕ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ರಚನೆಯ ‘ಕೃಷ್ಣೇಗೌಡನ ಆನೆ’ ನಾಟಕವನ್ನು ಕರಿಯಪ್ಪ ಕವಲೂರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.
