ರಸಗಂಗಾಧರ ಪ್ರೇಮದ ತಾರ್ಕಿಕ ಸಂಕಥನ

ಹುಲಸೂರು: ರಸಗಂಗಾಧರ ಪ್ರೇಮದ ತಾರ್ಕಿಕ ಸಂಕಥನವಾಗಿದೆ. ರಸಗಂಗಾಧರ ಕೃತಿಯ ರೂಪದ ನಾಟಕವಾಗಿದ್ದರೂ, ಆಂತರ್ಯದಲ್ಲಿ ಕಾವ್ಯದ ಸ್ವರೂಪ ಪಡೆದಿದೆ. ಚಾರಿತ್ರಿಕ ವಸ್ತುವಿನ ರಮ್ಯ ಮತ್ತು ದುರಂತ ವಸ್ತು ಹೊಂದಿದೆ ಎಂದು ಉಪನ್ಯಾಸಕ ರೇವಣಸಿದ್ದಪ್ಪ ದೊರೆಗಳ್ ಹೇಳಿದರು.
ಪಟ್ಟಣದ ಎಂ.ಕೆ. ಪಾರಶೆಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದೊಂದಿಗೆ ಬಸವಕಲ್ಯಾಣದ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನ ಆಯೋಜಿಸಿದ್ದ `ರಸಗಂಗಾಧರ ನಾಟಕದ ಚಾರಿತ್ರಿಕ ಮತ್ತು ತಾತ್ವಿಕ ಆಯಾಮಗಳು’ ಕುರಿತು ಉಪನ್ಯಾಸಮಾಲಿಕೆಯಲ್ಲಿ ಮಾತನಾಡಿ, ನಾಟಕದ ವಸ್ತು ಚಾರಿತ್ರಿಕವಾಗಿದ್ದರೂ ಸೃಜನಶೀಲತೆ ಮತ್ತು ರಮ್ಯತೆಯ ಕಾರಣಕ್ಕೆ ಹೆಚ್ಚು ಆಪ್ತವಾಗುತ್ತದೆ. ನಾಟಕ ಆರ್ತನಾದಗಳ ಕುರಿತು ಮಾತನಾಡುತ್ತಲೇ ಅಂತ್ಯವಾಗುತ್ತದೆ. ಲಾವಂಗಿ ಜಗನ್ನಾಥ ಪಂಡಿತರ ಪ್ರೇಮದ ತಾರ್ಕಿಕತೆ, ದಾರಾಶಿಖೋನ ಆಧ್ಯಾತ್ಮಿಕತೆ, ಶಹಜಹಾನನ ಸಂದಿಗ್ಧತೆಗಳು ಆಳದಿಂದ ಅನಾವರಣಗೊಂಡಿವೆ ಎಂದು ಹೇಳಿದರು.
ಕಾವ್ಯಶಕ್ತಿಯು ಮೀರುವಿಕೆಯನ್ನು ಕಲಿಸುತ್ತದೆ. ಬೌದ್ಧಿಕ ಪ್ರಬುದ್ಧತೆಯು ಎಲ್ಲ ಇಸಮ್ಗಳನ್ನು ಮಿರುವ ಸ್ಥಿತಿಯನ್ನು ಈ ನಾಟಕದ ಪಾತ್ರಗಳು ಧ್ವನಿಸುತ್ತವೆ. ನಾಟಕದಲ್ಲಿ ಕಂಡು ಬರುವ ದೊಡ್ಡ ವೈರುಧ್ಯವೆಂದರೆ, ಒಂದೆಡೆ ಎಲ್ಲವನ್ನೂ ತೊರೆದ ವಿರಾಗಿಯಂತೆ ಕಾಣುವ ದಾರಾಶಿಖೋ, ಮತ್ತೊಂದೆಡೆ ಎಲ್ಲವನ್ನೂ ತನ್ನದಾಗಿಸಿಕೊಳ್ಳುವ ಅಧಿಕಾರ ದಾಹಿ ಔರಂಗಜೇಬ ಕಾಣುತ್ತಾನೆ. ಪ್ರಭುತ್ವವು ಪ್ರಶ್ನಿಸುವುದನ್ನು ಸಹಿಸುವುದಿಲ್ಲ. ಅಧಿಕಾರದಲ್ಲಿರಬೇಕಾದರೆ ಸತ್ಯವನ್ನು ಮುಚ್ಚಿಡಬೇಕು ಎಂಬ ಧೋರಣೆಯನ್ನು ಅನುಸರಿಸುತ್ತದೆ ಎಂದು ಹೇಳಿದರು.
ಅಕ್ಕಮಹಾದೇವಿ ಕಾಲೇಜು ಉಪನ್ಯಾಸಕ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ರಸಗಂಗಾಧರ ನಾಟಕವು ಕಾವ್ಯ ಕಾವ್ಯಮೀಮಾಂಸೆ, ಪ್ರಭುತ್ವದ ಅಧಿಕಾರ, ವ್ಯಕ್ತಿಸ್ವಾತಂತ್ರ್ಯ, ಸೂಫಿ ದಾರ್ಶನಿಕತೆ, ಅಧ್ಯಾತ್ಮ ಪ್ರೇಮ ಮತ್ತು ಲೋಕ ವಿಮರ್ಶೆ ಮೊದಲಾದ ಅಂಶಗಳು ತಾತ್ವಿಕವಾಗಿ ಚರ್ಚಿತವಾಗಿವೆ. ಪ್ರೇಮದ ಉತ್ಕಟತೆಯನ್ನು ಪ್ರತಿಪಾದಿಸುತ್ತಲೇ, ಬದುಕಿನ – ಸಮಾಜದ ಸಂಕೀರ್ಣತೆಯನ್ನು ವಿಮರ್ಶಿಸುತ್ತದೆ. ಬರಹದ, ಬರಹಗಾರರ ಚರಿತ್ರೆ ವರ್ತಮಾನ, ಧರ್ಮ – ಪ್ರಭುತ್ವ, ಅಧಿಕಾರವನ್ನು ಕುರಿತು ಆಳದಿಂದ ವಿಮರ್ಶಿಸುತ್ತಲೇ ಹೊಸದೊಂದು ಚಿಂತನೆ ಕಟ್ಟಿಕೊಡುವ ದಾರಿ ಸೃಷ್ಟಿಸುತ್ತದೆ. ಡಾ.ವಿಕ್ರಮ ವಿಸಾಜಿಯವರು ಚರಿತ್ರೆಯ ವಸ್ತುವನ್ನು ಆಯ್ಕೆಮಾಡಿಕೊಂಡು, ಭೂತ – ವರ್ತಮಾನವನ್ನು ನಿರೂಪಿಸಿದ್ದಾರೆ ಎಂದು ವಿವರಿಸಿದರು.
ಪ್ರಾಂಶುಪಾಲ ಬಸವರಾಜ ಮೈಲಾರೆ, ಪ್ರೊ.ರಘುಪ್ರಸಾದ್, ಜಿಪಂ ಮಾಜಿ ಸದಸ್ಯಮಲ್ಲಪ್ಪ ಧಬಾಲೆ ಮಾತನಾಡಿದರು. ಚೇತನ ಡಾಗಾ, ಸಂತೋಷ ಮಹಾಜನ, ಡಾ.ಮಾರುತಿಕುಮಾರ, ಮಲ್ಲಿಕಾರ್ಜುನ ಇತರರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವಿಂದ್ರ ಬರಗಾಲೆ ಸ್ವಾಗತಿಸಿದರು. ಸಿದ್ರಾಮಪ್ಪ ಬಣಗಾರ ನಿರೂಪಣೆ ಮಾಡಿದರು. ಕುಪೇಂದ್ರ ರಾಠೋಡ ವಂದಿಸಿದರು.