ಮಂಟೇಸ್ವಾಮಿ ಕಥಾಪ್ರಸಂಗ ಪ್ರದರ್ಶನ

ಚಿಕ್ಕಮಗಳೂರು: ನಾಟಕಗಳ ಉದ್ದೇಶ ಮನರಂಜನೆ ಮಾತ್ರವಾಗಿರದೆ ಸಮಾಜ ತಿದ್ದುವ ಕೆಲಸವೂ ಆಗಿದೆ ಎಂದು ಬೆಂಗಳೂರು ವಿವಿ ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥ ಡಾ. ಕೆ.ರಾಮಕೃಷ್ಣಯ್ಯ ಅಭಿಪ್ರಾಯಪಟ್ಟರು.

ನಗರದ ಕುವೆಂಪು ಕಲಾಮಂದಿರದಲ್ಲಿ ರಂಗರಾಮ್ ಆರ್ಟ್ಸ್ ಫೌಂಡೇಶನ್​ನಿಂದ ಶನಿವಾರ ಆಯೋಜಿಸಿದ್ದ ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ನಾಟಕವು ಶ್ರವಣ ಮತ್ತು ದೃಶ್ಯ ಮಾಧ್ಯಮವಾಗಿದ್ದು, ಸುಲಭವಾಗಿ ಶ್ರೀಸಾಮಾನ್ಯರನ್ನು ಮುಟ್ಟುತ್ತದೆ. ಅತ್ಯಂತ ಸಂಕೀರ್ಣವಾದ ಜಾತಿ, ಮತ, ಪಂಥ, ವರ್ಗ ಭೇದಗಳ ಆಂತರಿಕ ಸಂಘರ್ಷವನ್ನು ಬಿಂಬಿಸುತ್ತದೆ. ಕನ್ನಡ ನಾಡಿನ ನಾಟಕ ಪರಂಪರೆ ದೊಡ್ಡದು ಮತ್ತು ವೈವಿಧ್ಯಮಯವಾದುದು. ಸಮಾಜದ ವೈರುಧ್ಯಗಳನ್ನು ಮನವರಿಕೆ ಮಾಡಿಕೊಡಲು ನಾಟಕ ಅತ್ಯಂತ ಪರಿಣಾಮಕಾರಿ ಮಾಧ್ಯಮ ಎಂದರು.

ಮಂಟೇಸ್ವಾಮಿ ಪ್ರಸಂಗ ಜನಪದ ಕಥಾವಸ್ತುವನ್ನು ಆಧರಿಸಿದ್ದು, ಹಳೆಯ ಮೈಸೂರು ಪ್ರಾಂತ್ಯದಲ್ಲಿ ಪ್ರಚಲಿತದಲ್ಲಿದ್ದು, ನೀಲಗಾರರು ಹಾಡುವ ಕಾವ್ಯ, ಇದು ಮೂಲತಃ ಉತ್ತರದಿಂದ ದಕ್ಷಿಣಕ್ಕೆ ಬಂದಿತೆಂಬ ಪ್ರತೀತಿ ಇದೆ. ಈ ಕಾವ್ಯವನ್ನು ಎಚ್.ಎಸ್.ಶಿವಪ್ರಕಾಶ್ ನಾಟಕವಾಗಿ ಪರಿವರ್ತಿಸಿದ್ದಾರೆ. ವಿಶೇಷವೆಂದರೆ ಮಲೆಯ ಮಾದೇಶ್ವರ ಮತ್ತು ಮಂಟೇಸ್ವಾಮಿ ಒಂದೇ ಪಂಗಡಕ್ಕೆ ಸೇರಿದವರೆಂಬ ನಂಬಿಕೆಯೂ ಇದೆ. ಹನ್ನೆರಡನೆ ಶತಮಾನದ ಬಸವಾದಿ ಶರಣರಿಂದ ಪ್ರೇರಿತರಾಗಿ ಮೌಢ್ಯವನ್ನು ತೊಲಗಿಸಿ, ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಕಾಳಜಿ ಇದರಲ್ಲಿ ಅಂತರ್ಗತವಾಗಿದೆ ಎಂದರು.

ಮಂಟೇಸ್ವಾಮಿಗೆ ಬಹುದೊಡ್ಡ ಭಕ್ತ ಪರಂಪರೆ ಮತ್ತು ಸಿದ್ದಪ್ಪಾಜಿ, ದೊಡ್ಡಮ್ಮಾಜಿಯಂತಹ ಶಿಷ್ಯರು ಇದ್ದು, ಜನಪದ ಕಾವ್ಯವನ್ನು ಸಮಕಾಲಿನ ದೃಷ್ಟಿಯಲ್ಲಿ ನೋಡುವುದಾಗಿದೆ. ಇದೊಂದು ವಿಶಿಷ್ಟ ಪ್ರಯೋಗವಾಗಿದ್ದು, ಬೆಂಗಳೂರಿನ ಕಲಾ ಮೈತ್ರಿಯ 96ನೆಯ ಯಶಸ್ವಿ ಪ್ರದರ್ಶನ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿ.ರಮೇಶ್ ಮಾತನಾಡಿ ಕಲೆ, ಸಾಹಿತ್ಯ ಹಾಗೂ ಕಲಾವಿದರಿಗೆ ಇಲಾಖೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ವಿವಿಧ ಯೋಜನೆಗಳನ್ನು ರೂಪಿಸಿದೆ. ಮಂಟೇಸ್ವಾಮಿ ನಾಟಕ ಪ್ರದರ್ಶನ ಜನಪದ ಸಂಸ್ಕೃತಿಯ ಪುನರ್ ಅವಲೋಕನ ಮಾಡಿಸಿದಂತಾಗುತ್ತದೆ ಎಂದರು.

ಸಾಹಿತಿ ಬೆಳವಾಡಿ ಮಂಜುನಾಥ, ವಿಶ್ವಕರ್ಮ ಆಚಾರ್ಯ ಮತ್ತು ಕಲ್ಕಟ್ಟೆ ನಾಗರಾಜ್​ರಾವ್ ನಿರ್ದೇಶಕ ಡಾ.ಕೆ.ರಾಮಕೃಷ್ಣಯ್ಯ ಅವರನ್ನು ಸನ್ಮಾನಿಸಿದರು. ರಂಗರಾಮ್ ಆರ್ಟ್ಸ್ ಫೌಂಡೇಶನ್​ನ ಎಚ್.ಆರ್.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಲಕ್ಷ್ಮೀ, ರಾಗಶ್ರೀ, ಕಿರಣ್ ಕುಮಾರ್ ಕಾರ್ಯಕ್ರಮದಲ್ಲಿದ್ದರು.