ಪರದೆ ಹಿಂದಿನ ಶ್ರಮಿಕರಿಗೂ ಬಯಲಾಟ ಪ್ರಶಸ್ತಿ ಗೌರವ

ಬಾಗಲಕೋಟೆ:ಬಯಲಾಟ ಗ್ರಾಮೀಣ ಭಾಗದಲ್ಲಿ ಕಂಡು ಬರುವ ಕಲೆ. ಆದರೆ, ಇಂದು ನೇಪಥ್ಯಕ್ಕೆ ಸರಿಯುತ್ತಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿ ನಿರಂತರ ಶ್ರಮಿಸುತ್ತಿದೆ. ರಾಜ್ಯದಲ್ಲಿರುವ ವಿವಿಧ ಅಕಾಡೆಮಿಗಳಿಗೆ ನೀಡುವ ಅನುದಾನದಷ್ಟೇ ಬಯಲಾಟ ಅಕಾಡೆಮಿಗೂ ಸರ್ಕಾರ ಅನುದಾನ ಒದಗಿಸಬೇಕು ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಶ್ರೀರಾಮ ಇಟ್ಟಣ್ಣವರ ಹೇಳಿದರು.

ಯಕ್ಷಗಾನದಿಂದ ಬಯಲಾಟ ಅಕಾಡೆಮಿ ವಿಂಗಡಣೆಯಾದ ಬಳಿಕ ಬಾಗಲಕೋಟೆ ಕೇಂದ್ರ ಸ್ಥಾನವಾಗಿಟ್ಟುಕೊಂಡು ಅಕಾಡೆಮಿ ಕಾರ್ಯಚಟುವಟಿಕೆ ನಡೆಸುತ್ತಿದೆ. ಪ್ರತಿವರ್ಷ ಸರ್ಕಾರ ಒಂದು ಕೋಟಿ ರೂ. ನೀಡಬೇಕು. ಬಾಗಲಕೋಟೆಯಲ್ಲಿ ಒಂದು ಎಕರೆ ಭೂಮಿ ಕೊಟ್ಟು ಕಟ್ಟಡಕ್ಕೆ ಅನುದಾನ ಒದಗಿಸಬೇಕು. ಇದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಯಲಾಟ ಪ್ರಚುರಗೊಳಿಸಲು ಅನುಕೂಲವಾಗಲಿದೆ. ಭೂಮಿ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಯಲಾಟದಲ್ಲಿ ಶ್ರೀಕೃಷ್ಣ ಪಾರಿಜಾತ, ಸಣ್ಣಾಟ, ಸೂತ್ರ ಗೊಂಬೆಯಾಟ, ತೊಗಲು ಗೊಂಬೆಯಾಟ, ದೊಡ್ಡಾಟ ಐದು ಪ್ರಕಾರಗಳು ಬರುತ್ತವೆ. ಇವುಗಳು ಮೆರೆಯಾಗಾಬಾರದೆಂಬ ಉದ್ದೇಶದಿಂದ ಎರಡು ವರ್ಷದಲ್ಲಿ ಅಕಾಡೆಮಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಬಯಲಾಟ ಪ್ರಕಾರಗಳ ಕುರಿತು ಉಪನ್ಯಾಸ, ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣ, ವಿದ್ಯಾರ್ಥಿಗಳ ಮೂಲಕ ಜಾಗೃತಿ, ವಿದ್ವಾಂಸರು, ವಿದ್ಯಾರ್ಥಿಗಳು, ಕಲಾವಿದರ ಮುಖಾಮುಖಿ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧೆಡೆ ನಡೆಸಲಾಗಿದೆ. ದೊಡ್ಡಾಟದ ನಾಲ್ಕು ಜನ ಹಿರಿಯ ಕಲಾವಿದರ ಗ್ರಂಥಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಬಯಲಾಟ ಅಕಾಡೆಮಿ ರಜಿಸ್ಟ್ರಾರ್ ಶಶಿಕಲಾ ಹುಡೇದ ಮಾತನಾಡಿ, 2017ನೇ ಸಾಲಿನಲ್ಲಿ 50 ಲಕ್ಷ, 2018ನೇ ಸಾಲಿನಲ್ಲಿ 70 ಲಕ್ಷ ರೂ. ಅನುದಾನ ಬಂದಿದೆ. ಉಳಿದ ಅಕಾಡೆಮಿಗೆ ಹೋಲಿಕೆ ಮಾಡಿದರೆ ಇದು ಕಡಿಮೆ ಅನುದಾನ. ರಾಜ್ಯವ್ಯಾಪಿ ಕಾರ್ಯಚಟುವಟಿಕೆ ಹೊಂದಿರುವ ಬಯಲಾಟ ಅಕಾಡೆಮಿಗೆ ವಾರ್ಷಿಕ ಒಂದು ಕೋಟಿ ಅನುದಾನ ನೀಡಬೇಕು ಎನ್ನುವುದು ನಮ್ಮ ಬೇಡಿಕೆ ಎಂದು ತಿಳಿಸಿದರು. ಅಕಾಡೆಮಿ ಸದಸ್ಯ ಶಿವಾನಂದ ಶೆಲ್ಲಿಕೇರಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಸಾಮಾಜಿಕ ನ್ಯಾಯ ಪರಿಪಾಲನೆ:ಸ್ಥಾಪನೆಯಾದ ನಂತರ ಇದೇ ಮೊದಲ ಬಾರಿಗೆ ಅಕಾಡೆಮಿಯಿಂದ ಪ್ರಶಸ್ತಿ ನೀಡಲಾಗುತ್ತಿದೆ. ಡಿ.22ರಂದು ಸದಸ್ಯರ ಒಪ್ಪಿಗೆ ಪಡೆದು 2017-2018ನೇ ಸಾಲಿನ ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ವಿಷಯದಲ್ಲಿ ಹಲವು ಮಾನದಂಡಗಳನ್ನು ಅನುಸರಿಸಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಗೌರವ, 50 ವರ್ಷ ಮೇಲ್ಪಟ್ಟವರಿಗೆ ವಾರ್ಷಿಕ ಪ್ರಶಸ್ತಿ ಕೊಡಮಾಡಲಾಗುತ್ತಿದೆ. ಬಯಲಾಟದ ಐದು ಪ್ರಕಾರಗಳ ಕಲಾವಿದರಿಗೆ ಹಾಗೂ ಪರದೆ ಹಿಂದೆ ಕೆಲಸ ಮಾಡಿದ ತಂತ್ರಜ್ಞರಿಗೂ ಪ್ರಶಸ್ತಿ ನೀಡಲಾಗುತ್ತಿದೆ. ಸಾಮಾಜಿಕ ನ್ಯಾಯ ಪರಿಪಾಲನೆ ಜತೆಗೆ ಮಹಿಳೆಯರು, ಎಸ್ಸಿ, ಎಸ್ಟಿ, ಅಂಗವಿಕಲ ಕಲಾವಿದರನ್ನೂ ಗುರುತಿಸಿ ಪ್ರಾದೇಶಿಕ ಸಮಾನತೆ ಕಲ್ಪಿಸಲಾಗಿದೆ. ಪ್ರಶಸ್ತಿ ಗಳು ಪುನಾವರ್ತನೆ ಯಾಗದಂತೆ ಜಾಗ್ರತೆ ವಹಿಸಲಾಗಿದೆ. ಅನೇಕರು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ಹಾಕದ ಒಳ್ಳೆಯ ಕಲಾವಿದರನ್ನೂ ಗುರುತಿಸಿ ಆಯ್ಕೆ ಮಾಡಿದ್ದೇವೆ. ಅನೇಕ ಜನ ಎಲೆಮರೆ ಕಾಯಿಯಂತೆ ಇರುತ್ತಾರೆ. ಅವರನ್ನು ಪತ್ತೆ ಮಾಡಿ ಗೌರವಿಸಿದ್ದೇವೆ. ಪಾತ್ರಧಾರಿಗಳ ಜತೆಗೆ ಪರದೆ ಹಿಂದಿನ ತಂತ್ರಜ್ಞರಿಗೂ ಪ್ರಶಸ್ತಿ ನೀಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಶ್ರೀರಾಮ ಇಟ್ಟಣ್ಣವರ ಹೇಳಿದರು.