ಮುಲ್ಲಾನ ಕೆರೆಗೆ ಚರಂಡಿ ನೀರು

ಹಾವೇರಿ: ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ಇಲ್ಲಿನ ಟಿಪ್ಪು ಸುಲ್ತಾನ ನಗರದ ಮುಲ್ಲಾನ ಕೆರೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಆದರೆ, ಅವೈಜ್ಞಾನಿಕ ಕಾಮಗಾರಿಯಿಂದ ಚರಂಡಿ ನೀರು, ತ್ಯಾಜ್ಯ ವಸ್ತುಗಳು ಕೆರೆಯ ಒಡಲು ಸೇರಿ ಸುತ್ತಲಿನ ನಿವಾಸಿಗಳಿಗೆ ಸಾಂಕ್ರಾಮಿಕ ರೋಗಗಳನ್ನು ತಂದೊಡ್ಡುತ್ತಿವೆ.

ಸುಮಾರು 2 ಎಕರೆ 31 ಗುಂಟೆ ವಿಸ್ತೀರ್ಣದ ಮುಲ್ಲಾನ ಕೆರೆಯ ನೀರಿನೊಂದಿಗೆ ಚರಂಡಿಯ ತ್ಯಾಜ್ಯವು ಸೇರಿ ಗಬ್ಬು ನಾರುತ್ತಿದೆ. ಇದರ ವಾಸನೆಯಿಂದ ಇಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ. ಸೊಳ್ಳೆಗಳ ಕಾಟವು ಹೆಚ್ಚಿ ನಿತ್ಯ ಒಬ್ಬಿಬ್ಬಿರು ಆಸ್ಪತ್ರೆ ಸೇರುವಂತಾಗಿದೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.

ಅವೈಜ್ಞಾನಿಕ ಅಭಿವೃದ್ಧಿ: ಮುಲ್ಲಾನ ಕೆರೆಯ ಸುತ್ತ ಕಲ್ಲಿನ ತಡೆಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಲಾಗಿದೆ. ಆದರೆ, ಚರಂಡಿ ನೀರು ತಡೆಗಟ್ಟುವುದು ಸೇರಿ ಕೆಲ ಸಣ್ಣಪುಟ್ಟ ಕಾಮಗಾರಿಗಳು ಬಾಕಿಯಿವೆ. ಕಳೆದ ಆರು ತಿಂಗಳಿನಿಂದ ಈ ಕಾಮಗಾರಿಗಳೆಲ್ಲಾ ನನೆಗುದಿಗೆ ಬಿದ್ದಿವೆ. ಕೆರೆಗೆ ಚರಂಡಿ ನೀರು ಬರದಂತೆ ತಡೆಯುವ ಕೆಲಸವನ್ನೇ ಮಾಡಿಲ್ಲ. ಹೀಗೆ, ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವುದರಿಂದ ಬಸವೇಶ್ವರ ನಗರದ ಕೆಲಭಾಗ ಮತ್ತು ಟಿಪ್ಪು ನಗರದ ಚರಂಡಿ ನೀರು ನೇರವಾಗಿ ಕೆರೆಗೆ ಸೇರುತ್ತಿದೆ. ಇದರಿಂದ ವಿಪರೀತ ದುರ್ನಾತ ಉಂಟಾಗಿ ನಿವಾಸಿಗಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕೆರೆಯಲ್ಲಿ ಕೊಳಚೆ ಹೆಚ್ಚಾಗಿರುವುದರಿಂದ ಹಂದಿಗಳು ಅಲ್ಲಿಯೇ ಬಿಡಾರ ಹೂಡುತ್ತಿವೆ.

40ಕ್ಕೂ ಹೆಚ್ಚು ಜನರಿಗೆ ಸಾಂಕ್ರಾಮಿಕ ಕಾಯಿಲೆ: ಮುಲ್ಲಾನ ಕೆರೆ ದುವಾರ್ಸನೆಯಿಂದಾಗಿ ಅಕ್ಕಪಕ್ಕದಲ್ಲಿರುವ 40ಕ್ಕೂ ಹೆಚ್ಚು ಜನರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ. ಕೆಲವೊಬ್ಬರು ಇಲ್ಲಿರುವುದೇ ಬೇಡ ಎಂದು ತಮ್ಮ ಸಂಬಂಧಿಗಳ ಊರಿಗೆ ಹೋಗಿ ನೆಲೆಸಿದ್ದಾರೆ. ಈ ಕುರಿತು ವಾರ್ಡ್ ಸದಸ್ಯರನ್ನು ಪ್ರಶ್ನಿಸಿದರೆ ಅವರು, ‘ನಮಗಿನ್ನೂ ಅಧಿಕಾರವೇ ಬಂದಿಲ್ಲ. ನಮ್ಮ ಮಾತು ಯಾರೂ ಕೇಳುತ್ತಿಲ್ಲಾ’ ಎನ್ನುತ್ತಾರೆ. ನಗರಸಭೆಯವರಿಗೂ ಸಾಕಷ್ಟು ಬಾರಿ ಮನವಿ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಕೊಳಚೆ ಪ್ರದೇಶವಾಗಿರುವುದರಿಂದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಮುಲ್ಲಾನ ಕೆರೆಗೆ ಸೇರುವ ಚರಂಡಿ ನೀರು ಹರಿದುಹೋಗಲು ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮುನ್ನ ಚರಂಡಿ ನೀರನ್ನು ಬೇರೆ ಕಡೆಗೆ ಸರಾಗವಾಗಿ ಕಳಿಸುವ ವ್ಯವಸ್ಥೆ ಮಾಡಬೇಕಿತ್ತು. ಅದನ್ನು ಮಾಡದೇ ಕೆರೆಗೆ ನೇರವಾಗಿ ನೀರು ಬಿಟ್ಟು ಕಲುಷಿತಗೊಳಿಸುತ್ತಿದ್ದಾರೆ. ಇದರಿಂದ ನಾನಾ ರೋಗಗಳು ಬರುತ್ತಿವೆ.
| ರಫೀಕ್​ಸಾಬ ಪಟೇಲ್, ಸ್ಥಳೀಯ ನಿವಾಸಿ