ದೊಡ್ಡಹಿತ್ಲು ಚರಂಡಿ ಸಮಸ್ಯೆ

|ಬಿ. ರಾಘವೇಂದ್ರ ಪೈ ಗಂಗೊಳ್ಳಿ
ಗಂಗೊಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನೇದಿನೆ ಬಿಗಡಾಯಿಸುತ್ತಿದ್ದು, ಎಲ್ಲೆಡೆ ತ್ಯಾಜ್ಯದ ದುರ್ನಾತ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಗಂಗೊಳ್ಳಿ ದೊಡ್ಡಹಿತ್ಲು ಪರಿಸರದಲ್ಲಿರುವ ಚರಂಡಿ ತ್ಯಾಜ್ಯಗಳಿಂದ ತುಂಬಿ ತುಳುಕುತ್ತಿದ್ದು, ಸ್ಥಳೀಯಾಡಳಿತ ಮೌನ ವಹಿಸಿದೆ. ಗಂಗೊಳ್ಳಿ ಪ್ರಮುಖ ಚರಂಡಿಗಳ ಮೂಲಕ ಹರಿದು ಬರುವ ಮಳೆ ನೀರು ದೊಡ್ಡಹಿತ್ಲು ಚರಂಡಿ ಮೂಲಕ ನದಿ ಸೇರುತ್ತದೆ. ಇಂತಹ ಪ್ರಮುಖ ಚರಂಡಿ ಇದೀಗ ತ್ಯಾಜ್ಯದ ಕೊಂಪೆಯಾಗಿ ಮಾರ್ಪಟ್ಟಿದೆ. ಸಾಯಂಕಾಲ ಬಳಿಕ ನುಸಿ ಕಾಟ ಹೆಚ್ಚಾಗಿದ್ದು, ಜನರು ನುಸಿಗಳ ಉಪಟಳದಿಂದ ಪಾರಾಗಲು ಹರಸಾಹಸ ಪಡುತ್ತಿದ್ದಾರೆ.

ಸುತ್ತಮುತ್ತಲಿನ ಪರಿಸರದ ಜನರು ಹಾಗೂ ಹೋಟೆಲ್, ಅಂಗಡಿಯವರು ತ್ಯಾಜ್ಯಗಳನ್ನು ರಾತ್ರಿ ವೇಳೆ ಸೇತುವೆ ಮೂಲಕ ಚರಂಡಿಗೆ ಎಸೆಯುತ್ತಿದ್ದಾರೆ. ಅಲ್ಲದೆ ಪರಿಸರದ ಜನರು ಕೂಡ ಚರಂಡಿಯಲ್ಲಿಯೇ ತ್ಯಾಜ್ಯ ವಿಸರ್ಜನೆ ಮಾಡುತ್ತಿದ್ದಾರೆ. ಪರಿಸರದ ಕೆಲವೊಂದು ಮನೆಯವರು ಶೌಚಗೃಹದ ಪೈಪನ್ನು ನೇರವಾಗಿ ಚರಂಡಿಗೆ ಸಂಪರ್ಕಿಸಿದ್ದು, ಚರಂಡಿಯಲ್ಲಿ ಶೌಚಗೃಹದ ನೀರು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತಿದೆ.

ಪರಿಸರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ದೊಡ್ಡಹಿತ್ಲು ಪ್ರದೇಶದಲ್ಲಿ ಈಗಾಗಲೇ ಮಲೇರಿಯಾ, ಫೈಲೇರಿಯಾ ಪ್ರಕರಣಗಳು ವರದಿಯಾಗಿದ್ದು, ಪರಿಸರದಲ್ಲಿ ಶುಚಿತ್ವ ಕಾಪಾಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಅಲ್ಲದೆ ಚರಂಡಿಯಲ್ಲಿನ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯಾಡಳಿತಕ್ಕೆ ಮನವಿ ಮಾಡಿದೆ. ಆದರೆ ಸ್ಥಳೀಯಾಡಳಿತವಾಗಲಿ ಅಥವಾ ಸಂಬಂಧಪಟ್ಟ ಯಾವುದೇ ಇಲಾಖೆ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ. ಪ್ರತಿನಿತ್ಯ ತ್ಯಾಜ್ಯ ಹೆಚ್ಚುತ್ತಲೇ ಇದೆ.

ಗಂಗೊಳ್ಳಿ ಬಂದರು ಸೇತುವೆ ಬಳಿ ಯಾವುದೇ ಭಯ ಅಂಜಿಕೆ ಇಲ್ಲದೆ ಮುಲಾಜಿಲ್ಲದೆ ಚರಂಡಿಗಳಲ್ಲಿ ತ್ಯಾಜ್ಯ ಎಸೆಯುತ್ತಿರುವುದು ವ್ಯವಸ್ಥೆಯನ್ನು ನಾಚಿಸುವಂತಾಗಿದೆ. ಮಳೆಗಾಲ ಸಮೀಪಿಸುತ್ತಿರುವುದರಿಂದ ಗಂಗೊಳ್ಳಿಯ ಸುತ್ತಮುತ್ತಲಿನ ಪ್ರದೇಶದ ಮಳೆ ನೀರು ಇದೇ ಚರಂಡಿ ಮೂಲಕ ನದಿ ಸೇರಬೇಕಾಗಿದ್ದು, ತ್ಯಾಜ್ಯ ತುಂಬಿರುವುದರಿಂದ ನೀರು ಹರಿದು ಹೋಗಲು ಸಮಸ್ಯೆಯಾಗುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಗಳಿವೆ. ಹೀಗಾಗಿ ಮಳೆ ಪ್ರಾರಂಭವಾಗುವುದರ ಒಳಗಾಗಿ ಚರಂಡಿ ಸ್ವಚ್ಛಗೊಳಿಸಲು ಸ್ಥಳೀಯಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ದೊಡ್ಡಹಿತ್ಲು ಪರಿಸರದ ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ತ್ಯಾಜ್ಯದ ವಾಸನೆಯಿಂದ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾತ್ರಿಯಾಗುತ್ತಿದ್ದಂತೆ ನುಸಿ ಕಾಟ ಹೆಚ್ಚಾಗುತ್ತದೆ. ಹೀಗಾಗಿ ಪರಿಸರದ ಜನರ ಆರೋಗ್ಯ ಮೇಲೆ ದುಷ್ಟರಿಣಾಮ ಬೀರುತ್ತಿದೆ. ಸ್ಥಳೀಯಾಡಳಿತ ದೊಡ್ಡಹಿತ್ಲು ಚರಂಡಿ ಶುಚಿಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು.
| ಬಸವ ಖಾರ್ವಿ, ಸ್ಥಳೀಯ ನಿವಾಸಿ

ದೊಡ್ಡಹಿತ್ಲು ಚರಂಡಿಯಲ್ಲಿ ಜನರು ತ್ಯಾಜ್ಯಗಳನ್ನು ಎಸೆಯುತ್ತಿದ್ದು, ದಿನದಿಂದ ದಿನಕ್ಕೆ ಚರಂಡಿಯಲ್ಲಿ ತ್ಯಾಜ್ಯ ಹೆಚ್ಚಾಗುತ್ತಿದೆ. ಮಳೆ ನೀರು ಸರಾಗವಾಗಿ ಹರಿದುಹೋಗಲು ಸಮಸ್ಯೆಯಾಗುತ್ತಿದೆ. ತ್ಯಾಜ್ಯಗಳು ಕೊಳೆತು ನಾರುತ್ತಿದೆ. ತ್ಯಾಜ್ಯಗಳ ವಾಸನೆಯಿಂದ ಪರಿಸರದಲ್ಲಿ ಜನರು ಜೀವಿಸಲು ಕಷ್ಟವಾಗುತ್ತಿದೆ. ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು.
| ನರಸಿಂಹ ಖಾರ್ವಿ, ಸ್ಥಳೀಯ ನಿವಾಸಿ

Leave a Reply

Your email address will not be published. Required fields are marked *