ಹವಾಲ್ದಾರ್‌ಬೆಟ್ಟು ಪರಿಸರದಲ್ಲಿ ಹರಿಯುತ್ತಿದೆ ಚರಂಡಿ ನೀರು

ಆರ್.ಬಿ ಜಗದೀಶ್ ಕಾರ್ಕಳ
ನಗರದಲ್ಲಿ ಉತ್ಪತ್ತಿಯಾಗುವ ಮಾನವ ತಾಜ್ಯವೂ ಸೇರಿ ಕಶ್ಮಲ ನೀರು ಒಳಚರಂಡಿ ಮೂಲಕ ಪುರಸಭೆ ವ್ಯಾಪ್ತಿಯ ಹವಾಲ್ದಾರ್‌ಬೆಟ್ಟು ಪರಿಸರದಲ್ಲಿ ಹರಿಯುತ್ತಿದೆ. ಅಸಮರ್ಪಕ ನಿರ್ವಹಣೆ, ಜನಪತ್ರಿನಿಧಿಗಳ, ಅಧಿಕಾರಿಗಳ ಬೇಜವ್ದಾರಿಯಿಂದ ಜನರ ಬದುಕು ದುಸ್ತರವಾಗಿದೆ.

‘ಅಸಮರ್ಪಕ ನಿರ್ವಹಣೆಯಿಂದ ಒಳಚರಂಡಿ ನೀರು ಎಲ್ಲೆಂದರಲ್ಲಿ ಹರಿಯುತ್ತಿದೆ. ಕುಡಿಯುವ ನೀರಿನ ಬಾವಿಗಳಿಗೆ ಈ ನೀರು ಸೇರಿದ್ದು ಸುಮಾರು 20ಕ್ಕೂ ಅಧಿಕ ಬಾವಿಗಳು ನಿರುಪಯುಕ್ತವಾಗಿವೆ. ಅಸಹ್ಯ ವಾಸನೆ, ಸೊಳ್ಳೆ ಕಾಟದಿಂದ ಬೇಸತ್ತ ಸ್ಥಳೀಯರು, ನಮ್ಮ ಪಾಲಿಗೆ ಸ್ಥಳೀಯಾಡಳಿತ, ಜಿಲ್ಲಾಡಳಿತ ಸತ್ತುಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪುರಸಭೆ ವ್ಯಾಪ್ತಿಯ ಮಾನವ ತಾಜ್ಯ ಹಾಗೂ ಇನ್ನಿತರ ಕಶ್ಮಲ ನೀರು ಸುಮಾರು 6.3 ಕಿ.ಮೀ ದೂರದಿಂದ 196 ಮ್ಯಾನ್‌ಹೋಲ್ ಮೂಲಕ 4 ಡಯಾಮೀಟರ್ ವ್ಯಾಸ ಉಳ್ಳ ಪೈಪು ಮೂಲಕ ಹರಿದು ಬಂದು ಹವಾಲ್ದಾರ್‌ಬೆಟ್ಟು ಪ್ರದೇಶದಲ್ಲಿನ 2.73 ಎಕರೆ ಪ್ರದೇಶದಲ್ಲಿ ಶೇಖರಣೆಯಾಗುತ್ತಿದೆ. ಒಳಚರಂಡಿ ರೊಚ್ಚು ಸಂಸ್ಕರಣ ಘಟಕ 90ರ ದಶಕದಲ್ಲಿ ಪ್ರಾರಂಭವಾಗಿದ್ದುಮ ಪೈಪುಗಳು ನಗರದ ರಸ್ತೆಯ ಮಧ್ಯಭಾಗದ ಮೂಲಕ ಹಾದು ಹೋಗಿವೆ. ಪ್ರಸಕ್ತ ಈ ಪೈಪುಗಳು ಶಿಥಿಲಾವಸ್ಥೆಯಲ್ಲಿದೆ. ಕೆಲವೊಮ್ಮೆ ರಸ್ತೆಯ ಮಧ್ಯಭಾಗದಿಂದ ಸೋರಿಕೆಯಾಗಿ ನಗರದ ಬಾವಿಗಳಿಗೂ ಸೇರಿ ನೀರು ಹಾಳಾಗುತ್ತಿದೆ. ಈಗಾಗಲೇ 50ಕ್ಕೂ ಅಧಿಕ ಬಾವಿಗಳು ನಿರುಪಯುಕ್ತವಾಗಿವೆ.

ಈ ವಿಷಯದಲ್ಲಿ ಕಾರ್ಕಳ ಪುರಸಭೆ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಕುಂದಾಪುರ ಸಹಾಯಕ ಕಮಿಷನರ್ ಮಧುಕೇಶ್ವರ್ ಭೇಟಿ ನೀಡಿದ ಸಂದರ್ಭ ಕಾರ್ಕಳ ಪುರಸಭೆ ಆಡಳಿತ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಜಿಲ್ಲಾಡಳಿತದಿಂದ ಸಿಕ್ಕಿಲ್ಲ ಸ್ಪಂದನೆ: 70 ವರ್ಷಗಳಿಗಿಂತಲೂ ಅಧಿಕ ವರ್ಷಗಳಿಂದ ಈ ಭಾಗದಲ್ಲಿ ಜನ ವಾಸವಾಗಿದ್ದು, ಒಳಚರಂಡಿ ಅವಾಂತರ ಸಮಸ್ಯೆ ಕುರಿತು ಜಿಲ್ಲಾಡಳಿತದ ಗಮನ ಸೆಳೆಯಲಾಗಿತ್ತು. ಆದರೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರಳುತ್ತಿದ್ದಾರೆ. ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವಲ್ಲೂ ಜಿಲ್ಲಾಡಳಿತ ವಿಫಲವಾಗಿದೆ.

ವಿಪರೀತ ಸೊಳ್ಳೆ ಹಾವಳಿ: ಸೊಳ್ಳೆ ಕಾಟದಿಂದ ರಾತ್ರಿ ವೇಳೆ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಸೊಳ್ಳೆ ಕಾಟದಿಂದ ಮನೆಗೆ ಯಾರೂ ಬರುವುದೂ ಇಲ್ಲ ಎನ್ನುತ್ತಾರೆ ಸ್ಥಳೀಯರು. ಸೊಳ್ಳೆ ಕಾಟದಿಮದಾಗಿ ರಾತ್ರಿ ವೇಳೆ ಈ ಭಾಗದ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಜನರ ಪಾಡು ಹೇಳತೀರದು. ಸಂಬಂಧಿತ ಅಧಿಕಾರಿಗಳು, ಜನಪ್ರತಿನಿಧಿಗಳು ಜನರಿಗಾಗುತ್ತಿರುವ ಈ ಸಮಸ್ಯೆಗೆ ಸ್ಪಂದಿಸಿ ನರಕಯಾತನೆಯಿಂದ ಮುಕ್ತಿ ನೀಡುತ್ತಾರೋ ಎಂದು ಕಾದು ನೋಡಬೇಕಿದೆ.

20 ವರ್ಷಗಳಿಂದ ನಾವು ಇಲ್ಲಿ ವಾಸವಾಗಿದ್ದೇವೆ. ಪ್ರತಿ ಬಾರಿ ಚುನಾವಣೆ ಸಂದರ್ಭ ಇಲ್ಲಿಗೆ ಜನಪತ್ರಿನಿಧಿಗಳು ಆಗಮಿಸಿ ಈ ಒಳಚರಂಡಿ ಕುರಿತು ಮಾತನಾಡಿ ಈ ಭಾಗದಿಂದ ಬೇರೆಡೆ ವರ್ಗಾಯಿಸುವುದಾಗಿ ಭರವಸೆ ನೀಡಿ ಮತ ಪಡೆದು ಬಳಿಕ ಇತ್ತ ಮುಖ ಮಾಡದೇ ಇರುವುದು ನಮ್ಮ ದುರಂತ. ಸ್ವಯಂಘೋಷಿತ ಅಭಿವೃದ್ಧಿ ಹರಿಕಾರರು ಎಲ್ಲಿ?
– ಮಹಾಬಲ, ಸ್ಥಳೀಯ ನಿವಾಸಿ

ನಾವು ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತಿದ್ದೇವೆ. ನಮಗೆ ಬದುಕುವ ಹಕ್ಕು ಇಲ್ಲವೇ? ಕುಡಿಯಲು ನೀರಿಲ್ಲ. ಇದ್ದ ನೀರಿಗೆ ಈ ತಾಜ್ಯದ ನೀರು ಸೇರ್ಪಡೆಯಾದರೆ ನಾವು ಜೀವಿಸುವುದು ಹೇಗೆ? ಪುರಸಭೆ ವತಿಯಿಂದ ತುರ್ತು ಕಾಮಗಾರಿ ನಡೆಸಿ ಇರುವ ಬಾವಿಯನ್ನು ಉಳಿಸುವ ಪ್ರಯತ್ನ ಮಾಡಬಹುದಲ್ಲವೇ?
– ಸುಪ್ರಿಯಾ ಕಾಮತ್, ಸ್ಥಳೀಯ ನಿವಾಸಿ

ಈಗಾಗಲೇ ಎಸ್‌ಟಿಪಿ ಹಾಗೂ ಎಫ್‌ಎಸ್‌ಎಸ್‌ಎಂ ಯೋಜನೆಗೆ ಹಸಿರು ನಿಶಾನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿಗೆ ಟೆಂಡರ್ ಪ್ರಕಿಯೆ ನಡೆಯಲಿದೆ. ಈಗಾಗಲೇ ಸರ್ಕಾರದ ಮಟ್ಟದಲ್ಲಿ 4.25 ಕೋಟಿ ರೂ. ಅನುದಾನ ನಿಗದಿಯಾಗಿದ್ದು, ಅದರಲ್ಲಿ 18, 19 ಸಾಲಿನಲ್ಲಿ ನಮ್ಮ ಪುರಸಭೆ ವತಿಯಿಂದ 45 ಲಕ್ಷ ರೂ. ಕಾಯ್ದಿರಿಸಲಾಗಿದೆ.
– ಮದನ್, ಪರಿಸರ ಅಭಿಯಂತರ