ಮಳೆಗಾಲಕ್ಕೆ ಇನ್ನೂ ಸಿದ್ಧಗೊಂಡಿಲ್ಲ ಚರಂಡಿ

>>

ಬಿ.ರಾಘವೇಂದ್ರ ಪೈ ಗಂಗೊಳ್ಳಿ
ಮಳೆಗಾಲ ಪ್ರಾರಂಭವಾದರೆ ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಕಷ್ಟಗಳ ಸುರಿಮಳೆಯೇ ಆರಂಭವಾಗಲಿದೆ. ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಚರಂಡಿ ಹೂಳೆತ್ತುವ ಮತ್ತು ಮಳೆಗಾಲ ಪೂರ್ವದಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಸ್ಥಳೀಯಾಡಳಿತ ಇನ್ನೂ ಮೌನ ವಹಿಸಿದೆ.

ಗಂಗೊಳ್ಳಿ ಜನರಿಗೆ ಮಳೆಗಾಲ ಬಂತೆಂದರೆ ಚಳಿ ಹಿಡಿಯಲು ಪ್ರಾರಂಭವಾಗುತ್ತದೆ. ಮಳೆ ನೀರು ಹರಿದುಹೋಗಲು ಸೂಕ್ತ ಚರಂಡಿ ಇಲ್ಲದೆ ಇರುವುದರಿಂದ ಮಳೆ ನೀರು ರಸ್ತೆ, ಮನೆಗಳಿಗೆ ನುಗ್ಗಿ ಸಮಸ್ಯೆ ಇನ್ನಷ್ಟು ಜಟಿಲವಾಗುವ ಸಾಧ್ಯತೆ ಹೆಚ್ಚಾಗಿದೆ. ಚರಂಡಿ ನಿರ್ವಹಣೆ ಮಾಡುವಲ್ಲಿ ಸ್ಥಳೀಯಾಡಳಿತ ವಿಫಲವಾಗಿರುವುದು ಮಳೆಗಾಲದಲ್ಲಿ ಅನಾಹುತಗಳಿಗೆ ಎಡೆ ಮಾಡಿಕೊಡುತ್ತಿದೆ.

ಮ್ಯಾಂಗನೀಸ್ ರಸ್ತೆ ಬಳಿಯಿಂದ ಚರ್ಚ್ ರಸ್ತೆ ಮತ್ತು ಶ್ರೀ ವಿಜಯವಿಠಲ ಮಂಟಪ ಬಳಿಯಿಂದ ಮುಖ್ಯರಸ್ತೆ ಮೂಲಕ ಚರ್ಚ್ ರಸ್ತೆಗೆ ಸಾಗಿ ದುರ್ಗಿಕೇರಿ ಚರಂಡಿಯಲ್ಲಿ ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಇದ್ದು, ಈ ಚರಂಡಿಯ ಬಹುಭಾಗ ಅತಿಕ್ರಮಣಗೊಂಡಿದೆ. ಇನ್ನೊಂದೆಡೆ ಚರಂಡಿಯಲ್ಲಿ ಭಾರಿ ಪ್ರಮಾಣದಲ್ಲಿ ಗಿಡಗಂಟಿಗಳು ಬೆಳೆದಿದ್ದು, ತ್ಯಾಜ್ಯಗಳು ಚರಂಡಿಗಳಲ್ಲೇ ಶೇಖರಣೆಗೊಂಡಿವೆ. ಅನೇಕ ವರ್ಷಗಳಿಂದ ಭಾರಿ ಅನಾಹುತಗಳಿಗೆ ಕಾರಣವಾಗಿದ್ದ ಅರೆಕಲ್ಲು ಪ್ರದೇಶ ಕೂಡ ಇದಕ್ಕೆ ಹೊರತಾಗಿಲ್ಲ. ಅರೆಕಲ್ಲು ಪ್ರದೇಶ ಮೂಲಕ ಸಾಗುವ ಚರಂಡಿಯ ಬಹುಭಾಗ ಅತಿಕ್ರಮಣಗೊಂಡು ಚರಂಡಿ ಚಿಕ್ಕದಾಗುತ್ತಿದೆ. ಚರಂಡಿಯಲ್ಲಿ ಮಣ್ಣು ರಾಶಿ ಹಾಕಲಾಗಿದ್ದು ಮಳೆ ನೀರು ಹರಿದು ಹೋಗಲು ತಡೆಯೊಡ್ಡಿದೆ. ಚರಂಡಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ಹಾಗೂ ಹೂಳು ತುಂಬಿದ್ದು ಗಿಡಗಂಟಿಗಳು ಬೆಳೆದಿವೆ. ದೊಡ್ಡಹಿತ್ಲು ಚರಂಡಿ ಸಂಪೂರ್ಣ ತ್ಯಾಜ್ಯಗಳಿಂದ ಕೂಡಿದ್ದು ಮಳೆ ನೀರು ಹರಿದು ಹೋಗಲು ಸಾಧ್ಯವಿಲ್ಲವಾಗಿದೆ.

ಮತ್ತೆ ಹಿಂದಿನ ಚಾಳಿ: ಮಳೆಗಾಲ ಪೂರ್ವ ಚರಂಡಿ ಹೂಳೆತ್ತಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಸ್ಥಳೀಯಾಡಳಿತ ಈವರೆಗೂ ಕ್ರಮ ಕೈಗೊಂಡಿಲ್ಲ. ಚರಂಡಿ ಸ್ವಚ್ಛತೆ, ಹೂಳೆತ್ತುವ ಪ್ರಕ್ರಿಯೆ ಮಾಡದ ಗ್ರಾಪಂ ಈ ಹಿಂದಿನ ಚಾಳಿಯನ್ನೇ ಮುಂದುವರಿಸಿದೆ. ಮಳೆಗಾಲ ಮುಗಿಯುವ ಹೊತ್ತಿಗೆ ಚರಂಡಿ ನಿರ್ಮಾಣಕ್ಕೆ ಮುಂದಾಗುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದೆ.

ಮಳೆಗಾಲದಲ್ಲಿ ಅನಾಹುತ ನಡೆಯುತ್ತದೆ ಎಂದು ಗೊತ್ತಿದ್ದೂ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ. ಮಳೆಗಾಲದ ಪೂರ್ವದಲ್ಲೇ ಎಲ್ಲ ಪ್ರಮುಖ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಚರಂಡಿಗಳಲ್ಲಿರುವ ಹೂಳು ತೆಗೆದು ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರತಿವರ್ಷ ಮಳೆಗಾಲದಲ್ಲಿ ಮುಖ್ಯರಸ್ತೆಯಲ್ಲಿ ನೀರು ನಿಲ್ಲುವುದು ಮಾಮೂಲಿ. ಮಳೆ ಆರಂಭಕ್ಕೂ ಮುನ್ನ ನೀರು ಹರಿದು ಹೋಗಲು ತಯಾರಿ ಮಾಡದ ಅಧಿಕಾರಿಗಳು ಮಳೆಗಾಲ ಮುಗಿಯುವ ಹೊತ್ತಿಗೆ ಚರಂಡಿ ನಿರ್ಮಿಸುವ ಕಾರ್ಯಕ್ಕೆ ಮುಂದಾಗುತ್ತಾರೆ. ಪ್ರತಿವರ್ಷ ಲಕ್ಷಾಂತರ ರೂ. ಚರಂಡಿ ನಿರ್ಮಿಸಲು ಪೋಲು ಮಾಡುತ್ತಿದ್ದು, ಶಾಶ್ವತ ಚರಂಡಿ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಬೇಕು.
-ಎಚ್.ಎಸ್.ಚಿಕ್ಕಯ್ಯ ಪೂಜಾರಿ, ಅಧ್ಯಕ್ಷರು, ನಾಗರಿಕ ಹೋರಾಟ ಸಮಿತಿ, ಗಂಗೊಳ್ಳಿ.

ಗಂಗೊಳ್ಳಿಯ ಪ್ರಮುಖ ಚರಂಡಿಗಳನ್ನು ಸ್ವಚ್ಛಗೊಳಿಸಿ ಹೂಳೆತ್ತಲು ಸೂಚನೆ ನೀಡಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದ್ದು, ಮಳೆಗಾಲ ಪ್ರಾರಂಭವಾಗುವುದರ ಒಳಗಾಗಿ ಎಲ್ಲ ಚರಂಡಿಗಳ ಹೂಳೆತ್ತಿ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಲಾಗುವುದು,
-ಶ್ರೀನಿವಾಸ ಖಾರ್ವಿ, ಅಧ್ಯಕ್ಷರು, ಗಂಗೊಳ್ಳಿ ಗ್ರಾಪಂ

ಕೆಲವು ಪ್ರಮುಖ ಚರಂಡಿಗಳನ್ನು ಹೂಳೆತ್ತಲು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಲು ಗ್ರಾಪಂನಿಂದ ಕ್ರಮ ಕೈಗೊಳ್ಳಲಾಗಿದೆ. ಮಳೆಗಾಲದಲ್ಲಿ ಮಳೆ ನೀರಿನಿಂದ ಯಾವುದೇ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತದೆ. ಕೆಲವೇ ದಿನಗಳಲ್ಲಿ ಚರಂಡಿ ಹೂಳೆತ್ತುವ, ಸ್ವಚ್ಛಗೊಳಿಸುವ ಕಾರ್ಯ ಆರಂಭವಾಗಲಿದೆ.
-ಚಂದ್ರಶೇಖರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗಂಗೊಳ್ಳಿ ಗ್ರಾಪಂ