ಇದ್ದಲ್ಲಿಯೇ ಮತ್ತೆ ಚರಂಡಿ

ಭರತ್‌ರಾಜ್ ಸೊರಕೆ ಮಂಗಳೂರು
ಲೇಡಿಹಿಲ್ ಜಂಕ್ಷನ್‌ನಿಂದ ಲಾಲ್‌ಭಾಗ್‌ವರೆಗೆ ಎರಡೂ ಬದಿ ರಸ್ತೆ ಚರಂಡಿ ಮತ್ತು ಫುಟ್‌ಪಾತ್ ಕಾಮಗಾರಿ ನಡೆದು ಒಂದೂವರೆ ವರ್ಷವೂ ಆಗಿಲ್ಲ. ಈಗ ಅದೇ ಚರಂಡಿಯನ್ನು ಮತ್ತೆ ಒಡೆದು ಕಟ್ಟುವ ಕಾರ್ಯ ನಡೆಯುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಯಿಂದ ಸಾರ್ವಜನಿಕರ ಹಣ ಕಣ್ಣೆದುರೇ ದುರುಪಯೋಗವಾಗುತ್ತಿದೆ.

ಕೆಲವು ಕಾಂಕ್ರೀಟ್ ಚಪ್ಪಡಿಗಳು ಬಿರುಕು ಬಿಟ್ಟ ನೆಪದಲ್ಲಿ ಪಾಲಿಕೆ ದುರಸ್ಥಿ ಕಾಮಗಾರಿಗೆ ಪ್ರಯತ್ನಿಸಿತ್ತು. ಟೆಂಡರ್ ಇಲ್ಲದೆ 25 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಮತ್ತು ಫುಟ್‌ಪಾತ್ ನಿರ್ಮಾಣ ಕಾಮಗಾರಿ ನಡೆಸಲು ಪ್ರಯತ್ನಿಸಿದಾಗ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದರು. ಎಚ್ಚೆತ್ತ ಪಾಲಿಕೆ ಆಗಿರುವಷ್ಟು ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಿ, ಟೆಂಡರ್ ಕರೆದು 2017ರ ಆಗಸ್ಟ್‌ನಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗೆ ಕಾರ್ಯಾದೇಶ ನೀಡಲಾಯಿತು.

ಈ ಕಾಮಗಾರಿ ಮುಗಿದು ಈಗ ಒಂದೂವರೆ ವರ್ಷ ಕಳೆದಿಲ್ಲ. ಇದೇ ಸ್ಥಳದಲ್ಲಿ ಚರಂಡಿಯನ್ನು ಮತ್ತೆ ಅಗೆದು ಕಟ್ಟುವ ಕೆಲಸ ನಡೆಯುತ್ತಿದೆ. ಲೇಡಿಹಿಲ್ ಜಂಕ್ಷನ್‌ನಿಂದ ಕರಾವಳಿ ಉತ್ಸವ ಮೈದಾನದ ಕೊನೆಯವರೆಗೂ ಸುಸ್ಥಿತಿಯಲ್ಲಿರುವ ಎರಡೂ ಬದಿಯ ಚರಂಡಿಯನ್ನು ಅಗೆಯಲಾಗಿದೆ. ಕರಾವಳಿ ಉತ್ಸವ ಮೈದಾನ ಪಕ್ಕದ ಚರಂಡಿ ಕಾಮಗಾರಿ ಅರ್ಧ ಪೂರ್ಣಗೊಂಡಿದೆ. ಲೇಡಿಹಿಲ್‌ನಿಂದ ಉರ್ವಕ್ಕೆ ಹೋಗುವ ಎಡಬದಿಯಲ್ಲಿ ಇದೇ ರೀತಿ ಉತ್ತಮ ಚರಂಡಿ ತೆಗೆದು ಕಟ್ಟಲಾಗುತ್ತಿದೆ.

2017ರಲ್ಲಿ ನಡೆದ ಈ ಚರಂಡಿ ಕಾಮಗಾರಿಯ ಅವ್ಯವಹಾರದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಅರ್ಜಿ ಇನ್ನೂ ವಿಚಾರಣೆ ಹಂತದಲ್ಲಿರುವಾಗಲೇ ಹಳೇ ಚರಂಡಿಯನ್ನು ಅಗೆಯಲಾಗಿದೆ.

ಇಂಟರ್‌ಲಾಕ್ ಕಿತ್ತು ಕಾಂಕ್ರೀಟ್: ಪ್ರೀಮಿಯಂ ಎಫ್‌ಎಆರ್‌ನ 4 ಕೋಟಿ ರೂ. ಹಣ ಬಳಸಿ ಪಾಲಿಕೆ ಎದುರಿನಿಂದ ಲೇಡಿಹಿಲ್ ಜಂಕ್ಷನ್‌ವರೆಗೆ ರಸ್ತೆ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಆದರೆ ಪ್ರಸ್ತುತ ಕಾಮಗಾರಿ ನಡೆದಿರುವುದು ಪಾರ್ಕಿಂಗ್ ಪ್ರದೇಶದಲ್ಲಿ. ಅಲ್ಲದೆ, ಈ ಸ್ಥಳದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಇಂಟರ್‌ಲಾಕ್‌ನ್ನು ಕಿತ್ತು ಕಾಂಕ್ರೀಟ್ ನಡೆಸಲಾಗಿದೆ. ಉತ್ತಮ ಇಂಟರ್‌ಲಾಕ್‌ನ್ನು ಕಿತ್ತು ಅಗಲೀಕರಣ ಎಂದು ಹೇಳುವ ಅವಶ್ಯಕತೆ ಏನಿತ್ತು ? ಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕ ಚರಂಡಿಗಳಿಲ್ಲದ ರಸ್ತೆಗಳು ಬಹಳಷ್ಟಿವೆ. ಇದನ್ನು ಬಿಟ್ಟು ಇದ್ದಲ್ಲಿಯೇ ಮತ್ತೆ ಕೆಲಸ ಯಾಕೆ ಎನ್ನುವುದು ಸ್ಥಳೀಯರ ಪ್ರಶ್ನೆ.

ಪಾಲಿಕೆಯಲ್ಲಿ ಜಮೆಯಾದ ಕೋಟಿಗಟ್ಟಲೆ ಪ್ರೀಮಿಯಂ ಎಫ್‌ಎಆರ್‌ನ ಹಣವನ್ನು ಮುಗಿಸಲು ಸುಸ್ಥಿತಿಯಲಿದ್ದ ಚರಂಡಿ, ರಸ್ತೆಯನ್ನು ಅಗೆಯಲಾಗುತ್ತಿದೆ. ತುಂಡಾದ ಚಪ್ಪಡಿಯನ್ನು ಬದಲಿಸಿದ್ದರೆ ಸಾಕಿತ್ತು. ಈಗ ಎಲ್ಲವನ್ನೂ ಅಗೆದು ಸಾರ್ವಜನಿಕರ ಹಣ ಸುಮ್ಮನೆ ಪೋಲು ಮಾಡುವ ಉದ್ದೇಶವೇನು? ಲೋಕಾಯುಕ್ತದಲ್ಲಿ ವಿಚಾರಣೆ ಇರುವಾಗಲೇ ಚರಂಡಿ ಕೆಲಸ ಮಾಡುವುದು ತಪ್ಪು.
| ಹನುಮಂತ ಕಾಮತ್ ಸಾಮಾಜಿಕ ಕಾರ್ಯಕರ್ತ050505